ನಾಲ್ವಡಿ ಕೃಷ್ಣರಾಜ ಒಡೆಯರ್, ಶಾಹು ಮಹಾರಾಜ್ ರನ್ನು ಪಠ್ಯದಲ್ಲಿ ಸೇರಿಸಲು ಒತ್ತಾಯ

ಬೆಂಗಳೂರು, ಜೂ.4: ‘ರಾಜ್ಯದಲ್ಲಿ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಸಾಂಸ್ಕೃತಿಕತೆ, ಕಲೆ, ಸಾಹಿತ್ಯವನ್ನು ಅಭಿವೃದ್ಧಿ ಪಡಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಶಾಹು ಮಹಾರಾಜ್ ಅವರ ಪಠ್ಯವನ್ನು ಕೇಂದ್ರ ಮತ್ತು ರಾಜ್ಯ ಮಟ್ಟದ ಪಠ್ಯಕ್ರಮಗಳಲ್ಲಿ ಸೇರ್ಪಡೆಗೊಳಿಸಬೇಕು’ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಒತ್ತಾಯಿಸಿದ್ದಾರೆ.
ರವಿವಾರ ನಗರದ ಪುರಭವನದಲ್ಲಿ ಸಮತಾ ಸೈನಿಕ ದಳ ವತಿಯಿಂದ ನಡೆದ ‘ಪರಿವರ್ತನಾ ಸಮಾವೇಶ’ದಲ್ಲಿ ಮಾತನಾಡಿದ ಅವರು, ಇಂದು ಕೆಲವರು ಮಂಗನಿಂದ ಮಾನವ ಎಂಬ ವೈಜ್ಞಾನಿಕತೆಯನ್ನೆ ಸುಳ್ಳೆಂದು ಬಿಂಬಿಸಿ ಡಾರ್ವಿನ್‍ನ ಸಿದ್ಧಾಂತವನ್ನು ಸಿಬಿಎಸ್‍ಸಿ ಪಠ್ಯದಿಂದ ತೆಗೆದು ಹಾಕಿದ್ದಾರೆ. ಈ ಶೈಕ್ಷಣಿಕ ದುರ್ನಡೆಗೆ ದೇಶದ ಬಹುತೇಕ ವಿಜ್ಞಾನಿಗಳು ವಿರೋಧಿಸಿದ್ದರೂ, ಸನಾತನವಾದಿಗಳು ಈ ಕೆಲಸ ಮಾಡಿದ್ದಾರೆ. ಇವರೆಲ್ಲರೂ ಮುಂದೊಂದು ದಿನ ಪಠ್ಯದಿಂದ ವಿಜ್ಞಾನವನ್ನೇ ತೆಗೆದು ಹಾಕುವ ಹಂತಕ್ಕೆ ಬಂದರೂ ಅಚ್ಚರಿಯಿಲ್ಲ. ಆದುದರಿಂದ ವೈಜ್ಞಾನಿಕತೆಗೆ ನಾಂದಿ ಆಡಿದ ಮೈಸೂರಿನ ಒಡೆಯರ್‍ರ ಸಾಧನೆಗಳನ್ನು ಇಂದಿನ ಮಕ್ಕಳು ಕಡ್ಡಾಯವಾಗಿ ಓದುವಂತಾದರೆ ಜ್ಞಾನದ ವಿಸ್ತರಣೆಯಾಗುತ್ತದೆ ಎಂದರು.
‘ಇವತ್ತಿನ ಜಿ20, ಆರ್ಥಿಕ ಸಮ್ಮೇಳನಗಳನ್ನು ಆಗಿನ ಕಾಲದಲ್ಲಿಯೇ ಮೈಸೂರಿನ ಒಡೆಯರ್ ನಡೆಸಿದ್ದರು. ಅವರು ಅನೇಕ ಆರ್ಥಿಕ ಸಮ್ಮೇಳನಗಳು, ವೈಜ್ಞಾನಿಕ ಸಂಶೋಧನೆಗಳು, ಸಾಹಿತ್ಯ, ಕಲೆ ಅಭಿವೃದ್ಧಿಗಾಗಿ ಕಸಾಪ ಸ್ಥಾಪನೆ, ಸಾರ್ವಜನಿಕರ ವ್ಯವಹಾರಕ್ಕೆ ಮೈಸೂರು ಬ್ಯಾಂಕ್ ಸ್ಥಾಪನೆ, ನೀರಾವರಿಗಾಗಿ ಅಣೆಕಟ್ಟೆಗಳನ್ನು ಕಟ್ಟಿಸಿದ್ದು, ಆಸ್ಪತ್ರೆಗಳ ಅಭಿವೃದ್ಧಿ, ಶಾಲಾ, ಕಾಲೇಜುಗಳ ಸ್ಥಾಪನೆ, ಸ್ಕೌಟ್ಸ್‍ಗೈಡ್ಸ್ ಪ್ರಾರಂಭ, ಕೃಷಿ ಚಟುವಟಿಕೆಗಾಗಿ ಪ್ರತ್ಯೇಕ ವಿವಿಗಳ ಸ್ಥಾಪನೆ, ವಿದ್ಯುತ್ ಉತ್ಪಾದನಾ ಘಟಕ ಹಾಗೂ ವಿವಿಧ ಕಾರ್ಖಾನೆಗಳ ಸ್ಥಾಪನೆ ಸೇರಿದಂತೆ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯವ ನಿಟ್ಟಿನಲ್ಲಿ ದೂರದೃಷ್ಠಿ ಹೊಂದಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿನ ಎಲ್ಲ ದಲಿತರ ಹಿಂದುಳಿದವರ ಏಳಿಗೆಗೆ ಬಹಳಷ್ಟು ಶ್ರಮಿಸಿದ್ದಾರೆ ಎಂದು ಎಲ್.ಹನುಮಂತಯ್ಯ ವಿವರಿಸಿದರು.
ಒಡೆಯರ್‍ರಂತೆಯೇ ಪ್ರಗತಿಪರ ಕೆಲಸಗಳನ್ನು ಮಾಡಿದ ಮತ್ತೊಬ್ಬ ಮೈಸೂರಿನ ರಾಜ ಟಿಪ್ಪು. ಇಂದು ಅನೇಕ ಮಂದಿ ಇತಿಹಾಸವನ್ನು ತಿಳಿಯದೆ ಮನಸ್ಸಿನಲ್ಲಿ ವಿಷ ತುಂಬಿಕೊಂಡು ಟಿಪ್ಪುನನ್ನು ನಿಂದಿಸುತ್ತಾರೆ. ಆದರೆ ಟಿಪ್ಪು ರೈತರಿಗೆ, ದಲಿತರಿಗೆ, ಹಿಂದುಳಿದವರಿಗೆ ಒಡೆಯರ್‍ರಂತೆಯೇ ಅನೇಕ ಜನೋಪಯೋಗಿ ಕಾರ್ಯಗಳನ್ನು ಮಾಡಿದ್ದಾರೆ. ಆ ಕಾಲದಲ್ಲಿ ದೇಶದ ದಲಿತರ ಸಮುದಾಯಕ್ಕೆ ಸೇರಿದ ಜನರ ಶಿಕ್ಷಣ, ಆರ್ಥಿಕ ಪರಿಸ್ಥಿತಿ ಅಥೋಗತಿಯಲ್ಲಿತ್ತು. ಹಸಿವಿಗಾಗಿ ಲಕ್ಷಾಂತರ ಅಸ್ಪøಶ್ಯರು ಹಸುವಿನ ಮಾಂಸ ತಿಂದು ಬದುಕಿದ್ದರು ಎನ್ನುವ ಸತ್ಯವನ್ನು ಇಂದಿನ ಕೆಲವು ಸನಾತನಿಗಳು ತಿಳಿಯಬೇಕಿದೆ. ಗೋವು ಆ ಜನಸಮೂಹದ ಆಹಾರವಾಗಿತ್ತು. ಆದರೆ ಇಂದು ಈ ಸತ್ಯವನ್ನು ಹೇಳುವ ಧೈರ್ಯ ಯಾವೊಬ್ಬ ದಲಿತನಿಗೆ ಇಲ್ಲ ಎನ್ನುವುದು ದುಃಖದ ಸಂಗತಿ ಎಂದು ಎಲ್.ಹನುಮಂತಯ್ಯ ವಿಷಾದಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಬಹುದೊಡ್ಡ ಮಾನವೀಯ ವ್ಯಕ್ತಿಯಾಗಿ ಮೈಸೂರು ರಾಜ್ಯದಲ್ಲಿ ಹುಟ್ಟಿದ್ದು ನಮ್ಮೆಲ್ಲರ ಪುಣ್ಯ. ದಲಿತ, ಹಿಂದುಳಿದ ಸಮುದಾಯಗಳಿಗೆ ಶಿಕ್ಷಣವನ್ನು ನೀಡಲಾರಂಭಿಸಿದರು. ಶೋಷಿತರ ಮೀಸಲಾತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರು. ಶಾಹುಮಹಾರಾಜ್ ಹಾಗೂ ಒಡೆಯರ್ ಇಬ್ಬರೂ ಸಮಕಾಲೀನರಷ್ಟೇ ಅಲ್ಲದೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಸ್ಪøಶ್ಯರು, ದಲಿತರು, ಹಿಂದುಳಿದವರು ಮುಂದೆ ಬರುವಲ್ಲಿ ಬಹಳಷ್ಟು ಶ್ರಮ ವಹಿಸಿದರು. ಎಲ್ಲರಿಗೂ ಸಮಾನ ರೀತಿಯ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿ ಕಾನೂನು ರೂಪಿಸಿದರು ಎಂದು ಎಲ್.ಹನುಮಂತಯ್ಯ ಹೇಳಿದರು.
ಸಮತಾ ಸೈನಿಕ ದಳದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ‘ನಾಲ್ವಡಿಯವರ ಜಯಂತಿಯನ್ನು ರಾಜ್ಯದ ಪ್ರತಿ ಗ್ರಾ.ಪಂ., ತಾ.ಪಂ., ಜಿ.ಪಂ., ಮತ್ತು ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಿಸುವಂತೆ ಸರಕಾರ ಆದೇಶ ಹೊರಡಿಸಬೇಕು. ಕೇಂದ್ರ ಹಾಗೂ ರಾಜ್ಯದ ಎಲ್ಲ ವಿವಿಗಳಲ್ಲಿ ಒಡೆಯರ್ ಅವರ ಅಧ್ಯಯನ ಪೀಠಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸ್ಥಾಪಿಸಬೇಕು. ಆರೋಗ್ಯ ಇಲಾಖೆಯ ಎಲ್ಲ ಒಳಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು. ರಾಜ್ಯದ 12ಸಾವಿರಕ್ಕೂ ಹೆಚ್ಚಿನ ಗ್ರಾಮ ಸಹಾಯಕರನ್ನು ಖಾಯಂಗೊಳಿಸಬೇಕು. ಪಿಟಿಸಿಎಲ್ ಕಾಯ್ದೆಗೆ ಸಮಗ್ರ ತಿದ್ದುಪಡಿ ತಂದು ಎಸ್ಸಿ-ಎಸ್ಟಿ ಜನಾಂಗಗಳ ಭೂಮಿ ಹಕ್ಕನ್ನು ರಕ್ಷಿಸಬೇಕು ಎಂದು ಸಮಾವೇಶದ ನಿರ್ಣಯಗಳನ್ನು ಮಂಡಿಸಲಾಯಿತು.
ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಸೇರಿದಂತೆ ಅನೇಕ ದಲಿತಪರ ಹೋರಾಟಗಾರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.