ಒಡಿಶಾ ರೈಲು ದುರಂತ: ಬೆಂಗಳೂರಿನ ಹೋಟೆಲ್ ಕಾರ್ಮಿಕ ಸಾವು

ಬೆಂಗಳೂರು, ಜೂ. 4: ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಬೆಂಗಳೂರಿನ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಪಶ್ಚಿಮ ಬಂಗಾಳ ಮೂಲದ ಸಾಗರ್ ಖೇರಿಯಾ ಎಂಬುವರೇ ಸಾವಿಗೀಡಾಗಿದ್ದು, ಅವರು ಬೆಂಗಳೂರಿನ ಹೋಟೆಲ್‍ನಲ್ಲಿ ಕೆಲಸ ನಿರ್ವಹಿಸಿದ್ದರು ಎಂದು ಮಾಹಿತಿ ಸಿಕ್ಕಿದೆ. ಕಾರ್ಮಿಕ ಸಾಗರ್ ಇತ್ತೀಚೆಗೆ, ಕೆಲಸದಿಂದ ರಜೆ ಪಡೆದು ತಮ್ಮ ಊರಿಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ಒಡಿಶಾದ ಬಾಲಸೋರ್‍ನಲ್ಲಿ ರೈಲು ದುರಂತ ಹಿನ್ನೆಲೆ ಕರ್ನಾಟಕ ರಾಜ್ಯಕ್ಕೆ ಬರಲಾಗದೆ ಪಶ್ಚಿಮ ಬಂಗಾಲದ ಕೊಲ್ಕತ್ತಾದ ಹೌರಾದಲ್ಲೇ ಉಳಿದಿದ್ದ 32 ಕ್ರೀಡಾಪಟುಗಳನ್ನ ರಾಜ್ಯ ಸರಕಾರದ ಅಧಿಕಾರಿಗಳು ವಾಪಸ್ ಕರೆತಂದಿದ್ದು, ರವಿವಾರ ಬೆಳಗ್ಗೆ ಇಂಡಿಗೋ ವಿಮಾನದಲ್ಲಿ ಆಟಗಾರರು ಬೆಂಗಳೂರಿನ ಬಂದಿಳಿದಿದ್ದಾರೆ.
‘ವಿಮಾನದ ಮೂಲಕ ನಮ್ಮನ್ನ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಸರಕಾರಕ್ಕೆ ಧನ್ಯವಾದಗಳು. ರಾಷ್ಟ್ರೀಯ ಮಟ್ಟದ 16 ವರ್ಷದ ಒಳಗಿನವರ ವಾಲಿಬಾಲ್ ಟೂರ್ನಿ ನಿಮಿತ್ತ ಪಶ್ಚಿಮ ಬಂಗಾಳಕ್ಕೆ ತೆರಳಿದ್ದೆವು. ಆದರೆ, ರೈಲು ದುರಂತದ ಹಿನ್ನೆಲೆಯಲ್ಲಿ ರೈಲು ಇಲ್ಲದೆ ಹೌರಾದಲ್ಲಿ ಉಳಿಯಬೇಕಾಯಿತು. ರಾಜ್ಯ ಸರಕಾರ ತ್ವರಿತ ಕ್ರಮವಹಿಸಿ ನಮ್ಮ ನೆರವಿಗೆ ಧಾವಿಸಿತು ಎಂದು ಆಟಗಾರ್ತಿಯೊಬ್ಬರು ತಿಳಿಸಿದ್ದಾರೆ.
ಸಂತೋಷ್ ಲಾಡ್ ಸಭೆ: ರೈಲ್ವೆ ದುರಂತದ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರದ ಪರವಾಗಿ ಘಟನಾ ಸ್ಥಳಕ್ಕೆ ತೆರಳಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಭುವನೇಶ್ವರದ ರಾಜೀವ್ ಭವನದಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳ ಆಯುಕ್ತರು, ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿ, ಎನ್‍ಡಿಆರ್‍ಎಫ್ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು.