ಜೀವಂತ ಇದ್ದೇನೆ ಎಂಬುದನ್ನು ಸಾಬೀತುಪಡಿಸಲು ಹೆಣಗಾಡುತ್ತಿರುವ 70ರ ವೃದ್ಧೆ!
ಆಗ್ರಾ: ಅಧಿಕೃತ ದಾಖಲೆಗಳ ಪ್ರಕಾರ "ಮೃತಪಟ್ಟಿರುವ" 70 ವರ್ಷ ವಯಸ್ಸಿನ ವಿಧವೆಯೊಬ್ಬರು ತಾನು ಜೀವಂತ ಇದ್ದೇನೆ ಎನ್ನುವುದನ್ನು ಸಾಬೀತುಪಡಿಸಲು ಎಂಟು ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿರುವ ವಿಚಿತ್ರ ಪ್ರಸಂಗ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
"ನನ್ನನ್ನು ಮೃತಪಟ್ಟಿದ್ದಾಗಿ ತೋರಿಸಿ ಮಗಳು ಹಾಗೂ ಅಳಿಯ ನನ್ನ ಐದು ಬಿಘಾ ಭೂಮಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ" ಎಂದು ಶಾಂತಿ ದೇವಿ ಆಪಾದಿಸಿದ್ದಾರೆ.
ಮುಜಾಫರ್ನಗರ ಜಿಲ್ಲೆಯ ತಂಧೇರಾ ನಿವಾಸಿಯಾಗಿರುವ ಈ ಮಹಿಳೆ ಜನಸಾಥ್ ತಾಲೂಕಿನಲ್ಲಿ ಶನಿವಾರ ನಡೆದ ಸಾರ್ವಜನಿಕ ಅಹವಾಲು ಶಿಬಿರ "ಸಂಪೂರ್ಣ ಸಮಾಧಾನ ದಿವಸ್"ಗೆ ಭೇಟಿ ನೀಡಿ, ತಾನು ಜೀವಂತ ಇರುವ ಬಗ್ಗೆ ಪ್ರಮಾಣಪತ್ರ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
"ನನ್ನ ಪತಿ ಬಾಬುರಾಮ್ ಎಂಟು ವರ್ಷ ಹಿಂದೆ ಮೃತಪಟ್ಟಿದ್ದರು. ಅವರಿಗೆ 28 ಬಿಘಾ ಕೃಷಿ ಭೂಮಿ ಇತ್ತು. ಇದರಲಿ 23 ಬಿಘಾ ಭೂಮಿಯನ್ನು ಮಗಳಿಗೆ ನೀಡಿ 5 ಬಿಘಾ ಜಮೀನು ಹಾಗೂ ಮನೆಯನ್ನು ನನಗೆ ಬಿಟ್ಟುಹೋಗಿದ್ದರು. ತನ್ನ ಮಗಳು ಹಾಗೂ ಅಳಿಯ ವಂಚನೆಯಿಂದ ನಾನು ಮೃತಪಟ್ಟಿದ್ದಾಗಿ ದಾಖಲೆ ಸೃಷ್ಟಿಸಿ ಆ 5 ಬಿಘಾ ಭೂಮಿ ಮತ್ತು ಮನೆಯನ್ನೂ ಕಬಳಿಸಿದ್ದಾರೆ" ಎಂದು ದೂರಿನಲ್ಲಿ ವಿವರಿಸಲಾಗಿದೆ.
"ಮಗಳು- ಅಳಿಯ ನನಗೆ ಕಿರುಕುಳ ನೀಡಿ, ಮನೆಯಿಂದ ಹೊರಗಟ್ಟಲು ಬಯಸಿದ್ದಾರೆ. ನನಗೆ ಊಟ ಕೂಡಾ ನೀಡುತ್ತಿಲ್ಲ.. ನಾನು ಜೀವಂತ ಇದ್ದೇನೆ ಎಂದು ಸಾಬೀತುಪಡಿಸಲು ಎಂಟು ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದೇನೆ. ಆದರೆ ಪ್ರಯೋಜನವಾಗಿಲ್ಲ. ಪತಿ ತಮ್ಮ ಬ್ಯಾಂಕ್ ಖಾತೆಯಲ್ಲಿ ಇಟ್ಟಿದ್ದ ಹಣವನ್ನು ಕೂಡಾ ಅವರು ಲಪಟಾಯಿಸಿದ್ದಾರೆ" ಎಂದು ಮಹಿಳೆ ಅಹವಾಲು ಸಲ್ಲಿಸಿದ್ದಾರೆ.
ಮಹಿಳೆ ಮೊದಲ ಬಾರಿಗೆ ನನ್ನ ಬಳಿಗೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ನಯೀಬ್ ತಹಸೀಲ್ದಾರ್ ಜಸ್ವೀಂದರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.