ಆಯನೂರು: ಬಾರ್ ಕ್ಯಾಶಿಯರ್ ನ ಕೊಲೆ

ಶಿವಮೊಗ್ಗ, ಜೂ.5: ಕ್ಷುಲ್ಲಕ ವಿಚಾರಕ್ಕೆ ಬಾರ್ ಕ್ಯಾಶಿಯರ್ ನನ್ನು ಮೂವರ ತಂಡವೊಂದು ಹಲ್ಲೆ ನಡೆಸಿ ಕೊಲೆಗೈದ ಘಟನೆ ರವಿವಾರ ರಾತ್ರಿ ಆಯನೂರಿನ ನವರತ್ನ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ.
ಬಾರ್ ಕ್ಯಾಶಿಯರ್ ಸಚಿನ್ (27) ಹತ್ಯೆಯಾದ ಯುವಕ.
ಬಾರ್ ಬಂದ್ ಮಾಡುವ ಸಮಯವಾದರೂ ಆಯನೂರು ತಾಂಡಾದ ನಿವಾಸಿಗಳಾದ ಮೂವರು ಮದ್ಯ ಸೇವಿಸುವುದನ್ನು ಮುಂದುವರಿಸಿದ್ದರೆನ್ನಲಾಗಿದೆ. ಈ ವೇಳೆ ಬಾರ್ ಸಿಬ್ಬಂದಿ ಸಮಯವಾಗಿದೆ ಎಂದು ಹೇಳಿದಾಗ, ತಾವು ಇನ್ನೂ ಮದ್ಯ ಸೇವಿಸಬೇಕಿದೆ ಎಂದು ತಂಡ ಹೊರಗೆ ಹೋಗಲು ನಿರಾಕರಿಸಿದ್ದಾರೆ. ಆಗ ಬಾರ್‌ನ ಅಸಿಸ್ಟೆಂಟ್ ಕ್ಯಾಶಿಯರ್ ಅರುಣ್ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕ್ಯಾಶಿಯರ್ ಸಚಿನ್ ಮೇಲೆ ಮೂವರು ಯುವಕರು ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾರೆ. ಓರ್ವ ಯುವಕ ಡ್ರ್ಯಾಗರ್ ನಿಂದ ಸಚಿನ್ ಎದೆಯ ಬಲಭಾಗಕ್ಕೆ ಚುಚ್ಚಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಸಚಿನ್ ರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.
ಗಲಾಟೆಯ ವೇಳೆ ಓರ್ವ ಯುವಕ ಬಿಯರ್ ಬಾಟಲಿಯನ್ನು ತಲೆಗೆ ಹೊಡೆದುಕೊಂಡು ಬಾರ್ ಸಿಬ್ಬಂದಿಗೆ ಚುಚ್ಚಲು ಮುಂದಾಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಅಸಿಸ್ಟೆಂಟ್ ಕ್ಯಾಶಿಯರ್ ಅರುಣ್ ಕುಮಾರ್ ಕೈಗೂ ಸಣ್ಣ ಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.