ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾದ ಕುಸ್ತಿಪಟುಗಳು; ನಿಷ್ಪಕ್ಷಪಾತ ತನಿಖೆ, ತ್ವರಿತ ಕ್ರಮಕ್ಕೆ ಆಗ್ರಹ

ಹೊಸದಿಲ್ಲಿ: ಬಿಜೆಪಿ ಸಂಸದ ಹಾಗೂ ದೇಶದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತದ ಅಗ್ರ ಕುಸ್ತಿಪಟುಗಳು ಶನಿವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.
ಒಲಿಂಪಿಯನ್ ಬಜರಂಗ್ ಪೂನಿಯಾ ಅವರು ಶನಿವಾರ ಸಂಜೆ ಗೃಹ ಸಚಿವರನ್ನು ಅವರ ದಿಲ್ಲಿಯ ಮನೆಯಲ್ಲಿ ಭೇಟಿಯಾದರು ಎಂದು NDTV ಗೆ ತಿಳಿಸಿದರು.
ರಾತ್ರಿ 11 ಗಂಟೆಗೆ ಆರಂಭವಾದ ಸಭೆಯು ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು. ಇದರಲ್ಲಿ ಪುನಿಯಾ, ಸಾಕ್ಷಿ ಮಲಿಕ್, ಸಂಗೀತಾ ಫೋಗಟ್ ಹಾಗೂ ಸತ್ಯವರ್ತ್ ಕಡಿಯನ್ ಭಾಗವಹಿಸಿದ್ದರು ಎಂದು ಮೂಲಗಳು ಹೇಳಿವೆ.
ಬಾಲಕಿ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಿಷ್ಪಕ್ಷಪಾತ ತನಿಖೆ ಹಾಗೂ ತ್ವರಿತ ಕ್ರಮಕ್ಕೆ ಕುಸ್ತಿಪಟುಗಳು ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ ಎಂದು ಅಮಿತ್ ಶಾ ಕುಸ್ತಿಪಟುಗಳಿಗೆ ಭರವಸೆ ನೀಡಿದರು. "ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳಲು ಬಿಡಿ" ಎಂದು ಅವರು ಕುಸ್ತಿಪಟುಗಳಿಗೆ ಹೇಳಿದರು.
ಕುಸ್ತಿ ಫೆಡರೇಶನ್ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಐದು ದಿನಗಳ ಗಡುವು ಶನಿವಾರ ಕೊನೆಗೊಂಡ ನಂತರ ಪ್ರತಿಭಟನಾ ನಿರತ ಕುಸ್ತಿಪಟುಗಳು ಶಾ ಅವರನ್ನು ಭೇಟಿಯಾಗಲು ಕೋರಿದ್ದರು ಎಂದು ಮೂಲಗಳು ಹೇಳಿವೆ.