ವಾರ್ಡಿಗೊಂದು ಪ್ರತ್ಯೇಕ ಕಡತ ಮಾಡಿ ಕೊಡಿ: ಬಿಬಿಎಂಪಿ ಅಧಿಕಾರಿಗಳಿಗೆ ಡಿ.ಕೆ.ಶಿವಕುಮಾರ್ ಸೂಚನೆ
ಬೆಂಗಳೂರಿನ ಜನಪ್ರತಿನಿಧಿಗಳ ಸರ್ವಪಕ್ಷ ಸಭೆ

ಬೆಂಗಳೂರು, ಜೂ.5: ಬಿಬಿಎಂಪಿ ವ್ಯಾಪ್ತಿಯ ವಾರ್ಡಿಗಳಲ್ಲಿ ಪ್ರತ್ಯೇಕ ಕಡತ ಮಾಡಿ ಲೆಕ್ಕಚಾರ ಇಡಬೇಕು. ವಾರ್ಡ್ ವಾರು ಅಭಿವೃದ್ಧಿ ಕಾರ್ಯಗಳ ಆರಂಭ, ಮಧ್ಯಂತರ ಮತ್ತು ಪೂರ್ಣಗೊಂಡ ವಿಡಿಯೊ ಮತ್ತು ಛಾಯಾಚಿತ್ರಗಳನ್ನು ಕಡತದಲ್ಲಿ ಮಂಡಿಸಬೇಕು ಎಂದು ಉಪಮುಖ್ಯಮಂತ್ರಿ, ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದ 3ನೆ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಂಗಳೂರಿನ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಸ್ವಚ್ಛತೆ ನಮ್ಮೆಲ್ಲರ ಹೊಣೆ. ಹೀಗಾಗಿ, ಪಾಲಿಕೆ ವ್ಯಾಪ್ತಿಯಲ್ಲಿ ಕಸ ನಿರ್ವಹಣೆಯ ಲೆಕ್ಕ ಇರಬೇಕು. ಎಲ್ಲಿಂದ ಎಲ್ಲಿಗೆ ಸಾಗಿಸಲಾಯಿತು ಎನ್ನುವುದು ಲೆಕ್ಕವಿರಬೇಕು ಎಂದು ಹೇಳಿದರು.
‘ಬ್ರಾಂಡ್ ಬೆಂಗಳೂರು ಬೆಟರ್ ಬೆಂಗಳೂರು’ ಆಗಬೇಕು ಎನ್ನುವ ಉದ್ದೇಶದಿಂದ ಸಭೆ ನಡೆಸಲಾಗಿದ್ದು, ಚುನಾವಣೆ ಮುಗಿಯುವುದರ ಜೊತೆಯಲ್ಲಿ ರಾಜಕಾರಣ ಸಹ ಮುಗಿದಿದೆ. ಬೆಂಗಳೂರು ಅಭಿವೃದ್ಧಿ ನಮ್ಮೆಲ್ಲರ ಗುರಿ, ನಮ್ಮ ನಗರದ ಅಂತರರಾಷ್ಟ್ರೀಯ ಮಾನ್ಯತೆಯನ್ನು ಕಾಪಾಡೋಣ. ಈ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳಿಗೂ ಹಾಗೂ ಹಿರಿಯ ಅಧಿಕಾರಿಗಳೂ ಸಲಹೆ ನೀಡಿದ್ದಾರೆ ಎಂದರು.
ಎಸ್.ಎಂ.ಕೃಷ್ಣ ಕಾಲದ ರೀತಿಯಲ್ಲಿ ಬೆಂಗಳೂರಿನ ಸ್ಟೇಕ್ ಹೋಲ್ಡರ್‍ಗಳನ್ನು ಭೇಟಿ ಮಾಡಿ ವಿಷನ್ ಬೆಂಗಳೂರು ಮತ್ತು ಗ್ಲೂಬಲ್ ಬೆಂಗಳೂರು ಅಡ್ವೈಸರಿ ಕಮಿಟಿ ರಚಿಸಲು ಯೋಜಿಸಲಾಗಿದೆ. ಬೆಂಗಳೂರು ಅಭಿವೃದ್ಧಿಯಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಪಾಲುದಾರರಾಗಿರುವ ಎಲ್ಲರನ್ನೂ ಒಳಗೊಂಡ ಪ್ರತ್ಯೇಕ ವಿಷಯಗಳ ಮೇಲೆ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.
ಒಂದೂವರೆ ಕೋಟಿ ಜನಸಂಖ್ಯೆ ಇರುವ ಈ ಬೆಂಗಳೂರು ಎಲ್ಲರಿಂದಲೂ ಬೆಳೆದಿದೆ. ಬೆಂಗಳೂರು ಇತಿಹಾಸವನ್ನು ಮರು ಸೃಷ್ಟಿಸುವ ಅಗತ್ಯವಿದೆ. ಮಳೆ ಬಂದರೆ ಹೇಗೆ ನಿರ್ವಹಣೆ ಮಾಡಬೇಕು. ಬಾಟಲ್ ನೆಕ್ ಗಳನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಾಗುವುದು, ವಿಡಿಯೊ ಕ್ಯಾಮೆರಾಗಳನ್ನು ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಹಲವರು ಒಳ್ಳೊಳ್ಳೆ ಸಲಹೆಗಳನ್ನು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸರಕಾರದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಸೇರಿದಂತೆ ಪ್ರಮುಖರಿದ್ದರು.
.jpg)







