ಎಂಆರ್‌ಪಿಎಲ್ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಕೊಡಿಸಿ, ಇಲ್ಲವೇ ರಾಜೀನಾಮೆ ಕೊಡಿ: ಮುನೀರ್ ಕಾಟಿಪಳ್ಳ
"ನಾಟಕ ಸಾಕು ನಳಿನ್ ಕುಮಾರ್ ಕಟೀಲ್, ಬಿಜೆಪಿ ಶಾಸಕರುಗಳೇ"

ಸುರತ್ಕಲ್, ಜೂ.5: ಎಂಆರ್‌ಪಿಎಲ್‌ನಲ್ಲಿ ಈ ಸಾಲಿನ 50 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು, ಈ ಬಾರಿಯೂ ಸ್ಥಳಿಯರುರಿಗೆ ಆದ್ಯತೆಯ ಉದ್ಯೋಗ ಕಲ್ಪಿಸಲು ಸಂಸದರು, ಶಾಸಕರು ವಿಫಲರಾಗಿದ್ದು, ಎಂಆರ್‌ಪಿಎಲ್ ನೊಂದಿಗೆ ಸೇರಿಕೊಂಡು ನಾಟವಾಡುತ್ತಾ ಜನರನ್ನು ವಂಚಿಸುತ್ತಿದ್ದಾರೆ ಎಂದು ಹೋರಾಟಗಾರ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಈ ಬಾರಿ ಘೋಷಿಸಲಾಗಿರುವ ಉದ್ಯೋಗದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವುದಾಗಿ ಹೇಳಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಎಂಆರ್‌ಪಿಎಲ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಫೋಟೊ ಸಹಿತ ಟ್ವೀಟ್ ಮಾಡಿದ್ದರು. ಈ ಕುರಿತು ಮಾತನಾಡಿರುವ ಮುನೀರ್ ಕಾಟಿಪಳ್ಳ, ಬಿಜೆಪಿಯವರಷ್ಟು ಲಜ್ಜೆ ರಹಿತ ರಾಜಕಾರಣಿಗಳು ಬಹುಷ ಯಾರೂ ಇಲ್ಲ. 2021ರಲ್ಲಿ ಎಂಆರ್‌ಪಿಎಲ್‌ನ 234 ಹುದ್ದೆಗಳ ನೇಮಕಾತಿಯ ಸಂದರ್ಭದಲ್ಲಿಯೂ ಇದೇ ನಾಟಕ ಆಡಲಾಗಿತ್ತು. ಸರಿಯಾಗಿ ಎರಡು ವರ್ಷಗಳ ಹಿಂದೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡಿಗರನ್ನು ಎಂಆರ್‌ಪಿಎಲ್ ಪೂರ್ತಿ ಹೊರಗಿಟ್ಟಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಕೇವಲ ಇಬ್ಬರು ಮಾತ್ರ ಅವಕಾಶ ಗಿಟ್ಟಿಸಿದ್ದರು.
ಈ ರೀತಿಯ ಉದ್ಯೋಗ ವಂಚನೆಯ ವಿರುದ್ಧ ಅಂದು ತುಳುನಾಡಿನಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು. ಜನಾಕ್ರೋಶಕ್ಕೆ ಬೆದರಿದ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಉಮಾನಾಥ ಕೋಟ್ಯಾನ್, ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಅವರು ಎಂಆರ್‌ಪಿಎಲ್ ಕಂಪೆನಿಯ ಅಧಿಕಾರಿಗಳೊಂದಿಗೆ "ಟೀ ಪಾರ್ಟಿ" ಸಭೆ ನಡೆಸಿದ್ದರು. ಸ್ಥಳೀಯರನ್ನು ಹೊರಗಿಟ್ಟು ಅಂತಿಮಗೊಂಡಿದ್ದ ನೇಮಕಾತಿ ಪ್ರಕ್ರಿಯೆ ರದ್ದು ಗೊಂಡಿದೆ ಎಂದು ಸುಳ್ಳು ಪ್ರಕಟನೆ ಹೊರಡಿಸಿ ತುಳುನಾಡಿನ ಯುವಜನರನ್ನು ವಂಚಿಸಿದ್ದರು ಎಂದು ಅವರು ಶಾಸಕರು, ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈಗ ಮತ್ತೆ 50 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಎಂಆರ್‌ಪಿಎಲ್‌ನ ಹಳೆಯ ಚಾಳಿಯಂತೆ ಸ್ಥಳೀಯ ಯುವಜನರಿಗೆ ಯಾವುದೇ ಆದ್ಯತೆ ಒದಗಿಸದೆ ಹೊರಗಿಡಲಾಗಿದೆ. ಕನ್ನಡಿಗರಿಗೂ ಇಲ್ಲ, ತುಳುವರಿಗೂ ಇಲ್ಲ. ಈ ಕುರಿತು ಪ್ರತಿಭಟನೆಗಳು ಆರಂಭಗೊಂಡಿದೆ. ಯಥಾಪ್ರಕಾರ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ಶಾಸಕರ ತಂಡ ಎಂಆರ್‌ಪಿಎಲ್ ಅಧಿಕಾರಿಗಳೊಂದಿದೆ ಚಾ ಕೂಟ ನಡೆಸಿ, "ಸ್ಥಳೀಯ ಯುವಕ, ಯುವತಿಯರಿಗೆ ನೇಮಕಾತಿಯಲ್ಲಿ ಆದ್ಯತೆ ಒದಗಿಸುವ ಕುರಿತು ಚರ್ಚಿಸಿದರು" ಎಂದು ಫೋಟೊ ಸಹಿತ ಮಾಧ್ಯಮಗಳಿಗೆ ಸುದ್ದಿ ರವಾನಿಸಿದೆ. ಸಾರ್ವಜನಿಕ ವಿರೋಧದ ಹೊರತಾಗಿಯೂ ಎಂಆರ್‌ಪಿಎಲ್ ರಾಷ್ಟ್ರೀಯ ಮಟ್ಟದಲ್ಲಿ 50 ಹುದ್ದೆಗಳ ನೇಮಕಾತಿಗೆ ಅರ್ಜಿ ಸ್ವೀಕಾರ ಮುಂದುವರಿಸಿದೆ. ಜೂನ್ 16ಕ್ಕೆ ಅರ್ಜಿ ಸ್ವೀಕಾರ ಅಂತಿಮಗೊಳ್ಳಲಿದೆ. ಇದು ಆರಂಭದ ಪ್ರಕ್ರಿಯೆ. ಈಗ ತಡೆ ಒಡ್ಡಲು ಸಾಧ್ಯವಿದ್ದು, ಎಂಆರ್‌ಪಿಎಲ್ ಕೇಂದ್ರ ಸರಕಾರದ ಉದ್ದಿಮೆ. ಬಿಜೆಪಿ ಸಂಸದ, ಶಾಸಕರು ಮನಸ್ಸು ಮಾಡಿದರೆ ʼಅರ್ಜಿ ಸ್ವೀಕಾರ' ತಡೆ ಹಿಡಿಯುವುದು ಚಿಟಿಕೆ ಹಾಕಿದಷ್ಟು ಸರಳ. ಆದರೆ, ಇವರ ಕೈ ಬೆರಳುಗಳು ಇಂತಹ ವಿಚಾರಗಳಲ್ಲಿ ತೀರಾ ದುರ್ಬಲ. ಅರ್ಜಿ ಸ್ವೀಕಾರ ಪ್ರಕ್ರಿಯೆ ರದ್ದು ಗೊಳಿಸದೆ, ಎಂಆರ್‌ಪಿಎಲ್ ಅಧಿಕಾರಿಗಳೊಂದಿಗೆ ಗೋಡಂಬಿ, ಫಿಸ್ತಾ, ಬಾದಾಮ್ ತಿಂದು, ಬಿಸಿ ಕಾಫಿ ಕುಡಿದು ಮಾಧ್ಯಮಗಳಿಗೆ ಫೋಸು ನೀಡಿದರೆ ಸ್ಥಳೀಯ ಯುವಕ, ಯುವತಿಯರಿಗೆ ಎಂಆರ್‌ಪಿಎಲ್ ನ ಚಿನ್ನದಂತ ಉದ್ಯೋಗ ದೊರಕುವುದು ಬಿಡಿ, ಅದಾನಿ ವಿಲ್ಮರ್, ರಾಮದೇವ್ ರ ರುಚಿ ಸೋಯಾ, ಯುಬಿ ಬಿಯರ್ ನಂತಹ ಉದ್ದಿಮೆಗಳಲ್ಲಿ ಗುತ್ತಿಗೆ ಆಧಾರಿತ ಸೆಕ್ಯೂರಿಟಿ ಗಾರ್ಡ್ ಉದ್ಯೋಗಗಳೂ ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿರುವ ಮುನೀರ್ ಕಾಟಿಪಳ್ಳ, ತುಳುನಾಡಿನ, ಕರುನಾಡಿನ ಯುವಜನರು ಎಚ್ಚೆತ್ತು ಬೀದಿಗಿಳಿಯದಿದ್ದರೆ, ಇಂತಹ "ಟೀ ಪಾರ್ಟಿ" ಜನಪ್ರತಿನಿಧಿಗಳು ಮರಳಿ ಗೆಲ್ಲಬಹುದೇ, ಹೊರತು 'ಉದ್ಯೋಗ ಭಾಗ್ಯ' ಕನಸಾಗಿಯೇ ಉಳಿಯಲಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧಮ್ಮು, ತಾಕತ್ತು ಇದ್ದಲ್ಲಿ, ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಿ: ಸಂಸದ, ಶಾಸಕರಿಗೆ ಮುನೀರ್ ಸವಾಲ್
ಈ ಬಾರಿ ಎಂಆರ್‌ಪಿಎಲ್‌ನಲ್ಲಿ ಅರ್ಜಿ ಆಹ್ವಾಣಿಸಲಾಗಿರುವ 50 ಹುದ್ದೆಗಳನ್ನು ನೀಡಲು ಸಾಧ್ಯವಾಗದ ದ.ಕ. ಜಿಲ್ಲೆಯ ಬಿಜೆಪಿ ಸಂಸದರು, ಶಾಸಕರು ನಿಷ್ಪ್ರಯೋಜಕರು ಎಂದು ಮುನೀರ್ ಕಾಟಿಪಳ್ಳ ಟೀಕಿಸಿದ್ದಾರೆ.
ನಿಷ್ಪ್ರಯೋಜಕ ಬಿಜೆಪಿ ಜನಪ್ರತಿನಿಧಿಗಳ ಸಾಮರ್ಥ್ಯ ಬಲ್ಲ ಎಂಆರ್‌ಪಿಎಲ್ ಅಧಿಕಾರಿಗಳು ಇವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡುವುದಿಲ್ಲ. ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಶಾಸಕರುಗಳಿಗೆ "ಧಮ್ಮು, ತಾಕತ್ತು" ಇದ್ದಲ್ಲಿ, ಸ್ಥಳೀಯರನ್ನು ಹೊರಗಿಟ್ಟು ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯನ್ನು ತಮ್ಮ ಆಧಿಕಾರ ಬಳಸಿ ಸ್ಥಗಿತಗೊಳಿಸಲಿ ಎಂದು ಸವಾಲು ಹಾಕಿದ್ದಾರೆ.