ನೋವಿನ ನೆನಪುಗಳನ್ನು ಹೊತ್ತು ಮರಳಿದ್ದೇನೆ; ಒಡಿಶಾ ರೈಲು ದುರಂತದ ಬಗ್ಗೆ ಸಚಿವ ಸಂತೋಷ್ ಲಾಡ್ ಭಾವುಕ ಪೋಸ್ಟ್

ಬೆಂಗಳೂರು: ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ರೈಲು ದುರಂತ ಹಿನ್ನೆಲೆಯಲ್ಲಿ ಕನ್ನಡಿಗರ ಸುರಕ್ಷತೆಯನ್ನು ಮೇಲ್ವಿಚಾರಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಒಡಿಶಾಕ್ಕೆ ತೆರಳಿದ್ದ ಸಚಿವ ಸಂತೋಷ್ ಲಾಡ್ ಸಂಕಷ್ಟದಲ್ಲಿದ್ದ ಬಹುತೇಕ ಕನ್ನಡಿಗರನ್ನು ವಿಮಾನಗಳ ಮೂಲಕ ರಾಜ್ಯಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲದೇ, ಒಡಿಶಾ ಸರಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಸಂತೋಷ್ ಲಾಡ್, ದುರಂತದಲ್ಲಿ ಸಿಲುಕಿ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿವಿಧ ರಾಜ್ಯಗಳ ಜನರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಈ ಕುರಿತಾಗಿ ಸೋಮವಾರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅವರು, ''ಬರೋಬ್ಬರಿ ಎರಡು ದಿನಗಳ ಕಾಲ ಅತ್ಯಂತ ಭಯಾನಕ ಭೀಕರತೆಗೆ ಸಾಕ್ಷಿಯಾಗಿ ಬಂದಿದ್ದೇನೆ! ಅಷ್ಟೊಂದು ಜನರ ದುರ್ಮರಣ, ಸಾವಿರಕ್ಕಿಂತ ಹೆಚ್ಚಿನ ಗಾಯಾಳುಗಳು, ಗುರುತೇ ಸಿಗದ ಮೃತ ದೇಹಗಳು, ತಮ್ಮವರ ದೇಹದ ಗುರುತು ಹಿಡಿದು ಬಿಕ್ಕಿ ಬಿಕ್ಕಿ ಅಳುತ್ತಿರುವ ವಾರಸುದಾರು!...'' ಎಂದು ವೀಡಿಯೊ ಸಹಿತ ವಿವರಿಸಿದ್ದಾರೆ.
''ವಿಧಿ ಎಷ್ಟೊಂದು ಕ್ರೂರಿ ಎಂದು ಸಂಕಟ ಪಡಬೇಕೋ? ನಮ್ಮವರೆಲ್ಲ ಸುರಕ್ಷಿತವಾಗಿದ್ದಾರೆ ಎಂದು ಸಮಾಧಾನ ಪಡಬೇಕೋ? ತಿಳಿಯುತ್ತಿಲ್ಲ! ಅಸುನೀಗಿದವರೂ ನಮ್ಮವರೇ ಅಲ್ಲವೇ? ಕಾಡುತ್ತಲೇ ಇರುವ ನೋವಿನ ನೆನಪುಗಳನ್ನು ಹೊತ್ತು ಮರಳಿದ್ದೇನೆ! ಮನಸ್ಸು ವಿಚಲಿತವಾಗಿದೆ, ಭಾರವಾಗಿದೆ, ಮೂಕವಾಗಿದೆ'' ಎಂದು ಸಚಿವರು ಬರೆದುಕೊಂಡಿದ್ದಾರೆ.
ಬರೋಬ್ಬರಿ ಎರಡು ದಿನಗಳ ಕಾಲ ಅತ್ಯಂತ ಭಯಾನಕ ಭೀಕರತೆಗೆ ಸಾಕ್ಷಿಯಾಗಿ ಬಂದಿದ್ದೇನೆ!
— Santosh Lad Official (@SantoshSLadINC) June 5, 2023
ಅಷ್ಟೊಂದು ಜನರ ದುರ್ಮರಣ! ಸಾವಿರಕ್ಕಿಂತ ಹೆಚ್ಚಿನ ಗಾಯಾಳುಗಳು! ಗುರುತೇ ಸಿಗದ ಮೃತ ದೇಹಗಳು! ತಮ್ಮವರ ದೇಹದ ಗುರುತು ಹಿಡಿದು ಬಿಕ್ಕಿ ಬಿಕ್ಕಿ ಅಳುತ್ತಿರುವ ವಾರಸುದಾರು! 1/2 pic.twitter.com/K8QWlXoLIS