ಅರ್ಚಕ ವೃತ್ತಿ ಪಡೆಯಲು ತಂದೆ ಕಡೆಯಿಂದ ಉತ್ತರಾಧಿಕಾರ ಅಗತ್ಯ: ಹೈಕೋರ್ಟ್

ಬೆಂಗಳೂರು, ಜೂ.5: ವಂಶಪಾರಂಪರ್ಯವಾಗಿ ದೇವಾಲಯವೊಂದರ ಅರ್ಚಕ ವೃತ್ತಿ ಪಡೆದುಕೊಳ್ಳಲು ಉತ್ತರಾಧಿಕಾರ ಸಂಬಂಧ ತಂದೆಯ ಕಡೆಯಿಂದ ಇರಬೇಕು. ತಾಯಿ ಕಡೆಯಿಂದ ಇದ್ದಲ್ಲಿ ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ದೇವಾಲಯವೊಂದರಲ್ಲಿ ತಾಯಿಯ ತಂದೆ(ಅಜ್ಜ) ಮತ್ತು ತಂದೆ ಹಲವು ವರ್ಷಗಳ ಕಾಲ ಅರ್ಚಕರಾಗಿ ಪೂಜಾ ಕಾರ್ಯಗಳಲ್ಲಿ ತೊಡಗಿದ್ದು, ಅದೇ ವೃತ್ತಿಗೆ ತಮ್ಮನು ನಿಯೋಜನೆ ಮಾಡಲು ನಿರ್ದೇಶನ ನೀಡಬೇಕು ಎಂದು ಕೋರಿ ಕೆ.ಆರ್.ಪುರದ ಎಂ.ಎಸ್.ರವಿ ದೀಕ್ಷಿತ್, ಎಂ.ಎಸ್.ವೆಂಕಟೇಶ್ ದೀಕ್ಷಿತ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಅಲ್ಲದೆ, ಅರ್ಚಕ ವೃತ್ತಿಯನ್ನು ವಂಶಪಾರಂಪರ್ಯವಾಗಿ ಮುಂದುವರೆಸಬೇಕು ಎಂಬ ಬೇಡಿಕೆ ಇಡಬೇಕಾದಲ್ಲಿ ಅರ್ಜಿದಾರರ ತಂದೆ ಮಾತ್ರವಲ್ಲ, ಅಜ್ಜ, ಮುತ್ತಜ್ಜ ಕೂಡ ಅದೇ ದೇವಾಲಯದಲ್ಲಿ ಅರ್ಚಕರಾಗಿ ಮುಂದುವರೆದಿರಬೇಕು. ಆದರೆ, ಅರ್ಜಿದಾರರ ತಂದೆ ಮತ್ತು ಅರ್ಜಿದಾರರ ತಾಯಿಯ ತಂದೆ(ಅಜ್ಜ) ಅರ್ಚಕರಾಗಿದ್ದರು ಎಂಬ ಕಾರಣ ನೀಡಿ ಅದೇ ವೃತ್ತಿಗೆ ತಮ್ಮನ್ನು ಪರಿಗಣಿಸಬೇಕು ಎಂದು ಕೋರಿ ಮನವಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿರುವ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.