ಗುಜರಾತ್ ಟೈಟನ್ಸ್ ತಂಡದ ಯಶ್ ದಯಾಳ್‌ರಿಂದ ಮುಸ್ಲಿಮರ ಕುರಿತು ವಿವಾದಾತ್ಮಕ ಪೋಸ್ಟ್: ಕ್ಷಮೆಯಾಚನೆ

ಮುಂಬೈ: ಗುಜರಾತ್ ಟೈಟಾನ್ಸ್ ತಂಡದ ವೇಗದ ಬೌಲರ್ ಯಶ್ ದಯಾಳ್ ಸೋಮವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ವಿವಾದಾತ್ಮಕ ಸ್ಟೋರಿ ಹಂಚಿ ವಿವಾದಕ್ಕೆ ಸಿಲುಕಿದ್ದಾರೆ.
ಲವ್ ಜಿಹಾದ್ ಕುರಿತಾದ ಸ್ಟೋರಿಯನ್ನು ದಯಾಳ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಲಾಗಿತ್ತು. ತಕ್ಷಣವೇ ಅದನ್ನು ಡಿಲಿಟ್ ಮಾಡಲಾಗಿತ್ತಾದರೂ, ಅದರ ಸ್ಕ್ರೀನ್ ಶಾಟ್ ಗಳು ಎಲ್ಲೆಡೆ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಮತ್ತೊಂದು ಸ್ಟೋರಿ ಹಾಕಿದ ದಯಾಳ್, ಕೈತಪ್ಪಿನಿಂದ ಪೋಸ್ಟ್ ಆಗಿರುವುದಕ್ಕೆ ಕ್ಷಮೆಯಾಚಿಸಿದ್ದರು. ಅಲ್ಲದೆ, "ದ್ವೇಷವನ್ನು ಹರಡಬೇಡಿ, ಪ್ರೀತಿಯನ್ನು ಹರಡಿ. ನಾನು ಪ್ರತಿ ಸಮಾಜ, ಸಮುದಾಯವನ್ನು ಗೌರವಿಸುತ್ತೇನೆ" ಎಂದು ಅವರು ಬರೆದಿದ್ದರು.
ಅದಾಗ್ಯೂ, ದಯಾಳ್ ಟೀಕೆಯನ್ನು ಎದುರಿಸಬೇಕಾಯಿತು. ಮುಸ್ಲಿಂ ಸಹ ಆಟಗಾರರಿಗೆ ನೀವು ಕೊಡುವ ಗೌರವ ಇದುವೇನಾ ಎಂದು ಹಲವು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಕೆಲವು ಗಂಟೆಗಳ ನಂತರ, ದಯಾಳ್ ಮತ್ತೊಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ಹ್ಯಾಕ್ ಮಾಡಿರುವ ಸಾಧ್ಯತೆಯ ಬಗ್ಗೆ ಗಮನ ಸೆಳೆದಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡಿರುವುದಾಗಿಯೂ ಹೇಳಿಕೊಂಡಿದ್ದಾರೆ.
ನನ್ನ Insta ಹ್ಯಾಂಡಲ್‌ನಲ್ಲಿ ಎರಡು ಸ್ಟೋರಿಗಳನ್ನು ಪೋಸ್ಟ್ ಮಾಡಲಾಗಿದೆ - ಇವೆರಡನ್ನೂ ನಾನು ಮಾಡಿಲ್ಲ. ನನ್ನ ಖಾತೆಯನ್ನು ಬೇರೆ ಯಾರೋ ಪೋಸ್ಟ್ ಮಾಡಲು ಬಳಸುತ್ತಿದ್ದಾರೆ ಎಂದು ನಾನು ಭಾವಿಸಿರುವ ಕಾರಣ ನಾನು ವಿಷಯವನ್ನು ಅಧಿಕಾರಿಗಳಿಗೆ ವರದಿ ಮಾಡಿದ್ದೇನೆ. ನನ್ನ Instagram ಖಾತೆಯ ಸಂಪೂರ್ಣ ನಿಯಂತ್ರಣವನ್ನು ಮರಳಿ ಪಡೆಯಲು ನಾನು ಪ್ರಯತ್ನಿಸುತ್ತಿದ್ದೇನೆ ಎಂದು ದಯಾಳ್ ಹೇಳಿದ್ದಾರೆ.