ದಲಿತ ಬಾಲಕ ಚೆಂಡು ಮುಟ್ಟಿದ್ದಕ್ಕೆ ಮಾವನ ಹೆಬ್ಬೆರಳು ತುಂಡರಿಸಿದ ಮೇಲ್ಜಾತಿಗಳು
ಗುಜರಾತ್‌ನಲ್ಲೊಂದು ಅಮಾನವೀಯ ಘಟನೆ

ಪಟನ್ (ಗುಜರಾತ್): ಗುಜರಾತ್ ನ ಪಟನ್ ಜಿಲ್ಲೆಯ ಶಾಲೆಯೊಂದರ ಮೈದಾನದಲ್ಲಿ ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿದ್ದಾಗ ದಲಿತ ಬಾಲಕನೊಬ್ಬ ಚೆಂಡನ್ನು ಹೆಕ್ಕಿದ್ದಕ್ಕೆ ಪ್ರತೀಕಾರವಾಗಿ, ರವಿವಾರ ಮೇಲ್ಜಾತಿಗಳ ಜನರ ಗುಂಪೊಂದು ಬಾಲಕನ ಮಾವನಿಗೆ ತೀವ್ರವಾಗಿ ಹಲ್ಲೆ ನಡೆಸಿ ಹೆಬ್ಬೆರಳನ್ನು ತುಂಡರಿಸಿದೆ.
ಕಾಕೋಶಿ ಗ್ರಾಮದ ಶಾಲೆಯೊಂದರ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದ ವೇಳೆ, ಒಮ್ಮೆ ದಲಿತ ಬಾಲಕನು ಚೆಂಡನ್ನು ಹೆಕ್ಕಿದ ಎನ್ನಲಾಗಿದೆ. ಅದರಿಂದ ಕೋಪಗೊಂಡ ಮೇಲ್ಜಾತಿಗಳಿಗೆ ಸೇರಿದ ಕೆಲವರು ಬಾಲಕನಿಗೆ ಬೆದರಿಕೆ ಹಾಕಿದರು ಎಂದು ಪೊಲೀಸರು ತಿಳಿಸಿದರು.
ಜಾತಿನಿಂದನೆಗೈದ ಆರೋಪಿಗಳು ದಲಿತ ಸಮುದಾಯವನ್ನು ಅವಾಚ್ಯವಾಗಿ ನಿಂದಿಸಿದರು ಎನ್ನಲಾಗಿದೆ.
ಬಾಲಕನ ಮಾವ ಧೀರಜ್ ಪರ್ಮಾರ್ ಇದನ್ನು ಆಕ್ಷೇಪಿಸಿದಾಗ, ಆ ಕ್ಷಣಕ್ಕೆ ವಿವಾದ ತಣ್ಣಗಾಯಿತು ಎಂದು ಪೊಲೀಸರು ತಿಳಿಸಿದರು.
ಆದರೆ, ಅದೇ ದಿನ ಸಂಜೆ ಹರಿತವಾದ ಆಯುಧಗಳನ್ನು ಹೊಂದಿದ್ದ ಏಳು ಮಂದಿಯ ಗುಂಪೊಂದು ಧೀರಜ್ ಮತ್ತು ಅವರ ಸಹೋದರ ಕೀರ್ತಿಯ ಮೇಲೆ ಆಕ್ರಮಣ ನಡೆಸಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಆರೋಪಿಗಳ ಪೈಕಿ ಒಬ್ಬನು ಕೀರ್ತಿಯ ಹೆಬ್ಬೆರಳನ್ನು ಕತ್ತಿಯಿಂದ ತುಂಡರಿಸಿದನು ಹಾಗೂ ಗಂಭೀರವಾಗಿ ಗಾಯಗೊಳಿಸಿದನು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಹಾಗೂ ಅವರನ್ನು ಬಂಧಿಸಲು ಪ್ರಯತ್ನಗಳು ಸಾಗಿವೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.