ಬ್ರಿಜ್ ಭೂಷಣ್ ವಿರುದ್ಧದ ದೂರನ್ನು ಹಿಂಪಡೆದಿರುವ ಸುದ್ದಿ ನಿರಾಕರಿಸಿದ ಅಪ್ರಾಪ್ತ ಮಹಿಳಾ ಕುಸ್ತಿಪಟುವಿನ ತಂದೆ

ಹೊಸದಿಲ್ಲಿ: ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಅಪ್ರಾಪ್ತ ಮಹಿಳಾ ಕುಸ್ತಿಪಟು ತನ್ನ ದೂರನ್ನು ಹಿಂಪಡೆದಿರುವ ಸುದ್ದಿ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ನಾವು ದೂರನ್ನು ಹಿಂಪಡೆದಿಲ್ಲ ಎಂದು ಅಪ್ರಾಪ್ತೆ ಕುಸ್ತಿಪಟುವಿನ ತಂದೆ ThePrint ಗೆ ಸ್ಪಷ್ಟಪಡಿಸಿದ್ದಾರೆ.
“ಸುದ್ದಿ ಸಂಪೂರ್ಣ ಸುಳ್ಳು. ನಾನು ದೂರನ್ನು ಹಿಂಪಡೆದಿಲ್ಲ. ನಾನು ಹೋರಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಹಾಗೂ ನಾನು ಹಾಗೆ ಮಾಡುತ್ತೇನೆ, ”ಎಂದು ಬಾಲಕಿಯ ತಂದೆ ದೂರವಾಣಿಯಲ್ಲಿ ThePrint ಗೆ ತಿಳಿಸಿದರು.
“ಹೌದು, ನನಗೆ ಹೋರಾಡುವ ಮನೋಭಾವವಿದೆ. ನಾನು ಅದರ ವಿರುದ್ಧ ಹೋರಾಡುತ್ತಿದ್ದೇನೆ, ಆದರೆ ನಾನು ಎಲ್ಲಿಯವರೆಗೆ ಮುಂದುವರಿಯಬಹುದು? ಈ ಅನುಭವ ನನ್ನನ್ನು ಸಂಪೂರ್ಣವಾಗಿ ಬರಿದು ಮಾಡಿದೆ'' ಎಂದರು.
"ಈ ರೀತಿಯ ಏನಾದರೂ ಸಂಭವಿಸಿದೆಯೇ ಎಂದು ನಾನು ಅವಳನ್ನು ನಿರ್ದಿಷ್ಟವಾಗಿ ಕೇಳಿದ್ದೆ, ಅವಳು ಆ ರೀತಿಯ ಏನೂ ಸಂಭವಿಸಿಲ್ಲ ಎಂದು ಹೇಳಿದ್ದಾಳೆ’’ ಎಂದು ಬಾಲಕಿಯ ಚಿಕ್ಕಪ್ಪ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ವೀಡಿಯೊವನ್ನು ಉಲ್ಲೇಖಿಸಿ ಈ ಹಿಂದೆ ಮಾಧ್ಯಮಗಳು ವರದಿ ಮಾಡಿವೆ.
ಚಿಕ್ಕಪ್ಪ ಹಾಗೂ ಅಪ್ರಾಪ್ತ ಕುಸ್ತಿಪಟುವಿನ ತಂದೆ ವರ್ಷಗಳಿಂದ ಪರಸ್ಪರ ಮಾತನಾಡಿಲ್ಲ ಎಂದು ವರದಿಯಾಗಿದೆ.
ದಿಲ್ಲಿ ಮಹಿಳಾ ಆಯೋಗವು ದಿಲ್ಲಿ ಪೊಲೀಸರಿಗೆ ನೋಟಿಸ್ ನೀಡಿದ ವೈರಲ್ ವೀಡಿಯೊದಲ್ಲಿ, ಚಿಕ್ಕಪ್ಪ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತೆ ಹಾಗೂ ಆಕೆಯ ತಂದೆಯ ಗುರುತನ್ನು ಬಹಿರಂಗಪಡಿಸಿದ್ದಾರೆ.
ಎಪ್ರಿಲ್‌ನಲ್ಲಿ ಅಪ್ರಾಪ್ತೆ ಸೇರಿದಂತೆ ಏಳು ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ದೂರುಗಳನ್ನು ದಾಖಲಿಸಿದ್ದರು. ಅದರ ನಂತರ ಬ್ರಿಜ್ ಭೂಷಣ್ ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಯಿತು. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲೂ ಸಿಂಗ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.