ಮಣಿಪುರ: ಭಾರೀ ಗುಂಡಿನ ಚಕಮಕಿಯಲ್ಲಿ ಬಿಎಸ್ ಎಫ್ ಯೋಧ ಮೃತ್ಯು

ಇಂಫಾಲ: ಮಣಿಪುರದ ಕಾಕ್ಚಿಂಗ್‌ನಲ್ಲಿ ಮಂಗಳವಾರ ಮುಂಜಾನೆ 4.15ಕ್ಕೆ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕಾನ್‌ಸ್ಟೆಬಲ್ ಒಬ್ಬರು ಸಾವನ್ನಪ್ಪಿದ್ದಾರೆ.
ಬಿಎಸ್‌ಎಫ್ ವಕ್ತಾರರ ಪ್ರಕಾರ, ಕುಕಿ ದುಷ್ಕರ್ಮಿಗಳು ನಡೆಸಿದ ಭಾರೀ ಗುಂಡಿನ ದಾಳಿಯ ನಂತರ ಕಾನ್‌ಸ್ಟೆಬಲ್ ರಂಜಿತ್ ಯಾದವ್‌ಗೆ ಬುಲೆಟ್ ಗಾಯಗಳಾಗಿವೆ. ಅವರನ್ನು ಕಕ್ಚಿಂಗ್‌ನ ಜೀವನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.
" ಶಂಕಿತ ಕುಕಿ ದುಷ್ಕರ್ಮಿಗಳು ಮಂಗಳವಾರ ಸುಗ್ನುವಿನ ಸೆರೋ ಪ್ರಾಕ್ಟಿಕಲ್ ಹೈಸ್ಕೂಲ್‌ನಲ್ಲಿ ನಿಯೋಜಿಸಲಾದ ಬಿಎಸ್‌ಎಫ್ ಪಡೆಗಳ ಕಡೆಗೆ ವಿವೇಚನಾರಹಿತ ಮತ್ತು ಭಾರೀ ಪ್ರಮಾಣದ ಗುಂಡಿನ ದಾಳಿ ನಡೆಸಿದರು. ಬಿಎಸ್‌ಎಫ್ ಪಡೆಗಳು ಮತ್ತು ಶಂಕಿತ ಕುಕಿ ದುಷ್ಕರ್ಮಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಕಾನ್‌ಸ್ಟೆಬಲ್ ಯಾದವ್ ಅವರಿಗೆ ಬುಲೆಟ್ ಗಾಯವಾಯಿತು , ಕಾಕ್ಚಿಂಗ್‌ನ ಜೀವನ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು ” ಎಂದು ವಕ್ತಾರರು ತಿಳಿಸಿದ್ದಾರೆ.
ಸೇನೆಯ ಪ್ರಕಾರ, ಇಬ್ಬರು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೀಟೈ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು 'ಬುಡಕಟ್ಟು ಐಕಮತ್ಯ ಮೆರವಣಿಗೆ' ಆಯೋಜಿಸಿದ ನಂತರ ಮೇ 3 ರಂದು ರಾಜ್ಯದಲ್ಲಿ ಹಿಂಸಾಚಾರ ಆರಂಭವಾಗಿದೆ.