ವಿಜಯನಗರ ಜಿಲ್ಲೆ ಮತ್ತೆ ಬಳ್ಳಾರಿಗೆ ಸೇರ್ಪಡೆ?; ಸಚಿವ ಬಿ. ನಾಗೇಂದ್ರ ಹೇಳಿದ್ದೇನು?

ಬಳ್ಳಾರಿ: ವಿಜಯನಗರ ಜಿಲ್ಲೆಯನ್ನು ಮತ್ತೆ ಬಳ್ಳಾರಿ ಜಿಲ್ಲೆಯಲ್ಲಿ ವಿಲೀನ ಮಾಡುವ ವಿಚಾರಕ್ಕೆ ಸಂಬಂಧಿಸಿ ಕ್ರೀಡಾ ಮತ್ತು ಯುವಜನ ಇಲಾಖೆ ಸಚಿವ ಬಿ. ನಾಗೇಂದ್ರ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ವಿಶ್ವ ಪ್ರಸಿದ್ಧ ಹಂಪಿ, ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಸೇರಿದಂತೆ ಇತರ ಪ್ರೇಕ್ಷಣೀಯ ಸ್ಥಳಗಳು ನಮ್ಮ ಜಿಲ್ಲೆಯಿಂದ ದೂರವಾಗಿವೆ, ಇದು ನಮಗೆ ಅತ್ಯಂತ ನೋವು ತಂದಿದೆ'' ಎಂದು ಹೇಳಿದರು.
''ವಿಜಯನಗರ ಜಿಲ್ಲೆಯನ್ನು ಮತ್ತೆ ಬಳ್ಳಾರಿಗೆ ಸೇರ್ಪಡೆ ಮಾಡಲು ಎಲ್ಲ ಜನಪ್ರತಿನಿಧಿಗಳು ಒಪ್ಪಿದರೇ ತೀರ್ಮಾನ ಕೈಗೊಳ್ಳಲು ಸಿದ್ದ. ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿ ಮಾಡಲು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುವೆ'' ಎಂದು ತಿಳಿಸಿದರು.
ಮಾಜಿ ಸಚಿವ ಆನಂದ್ ಸಿಂಗ್ ಅವರು ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪಟ್ಟು ಹಿಡಿದು ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡಿಸಿದ್ದರು. ಬಳಿಕ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಜಯನಗರ ಜಿಲ್ಲೆ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತ್ತು.