ಅನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರಿನಲ್ಲಿ 'ಆ್ಯಂಟಿ ಕಮ್ಯುನಲ್ ವಿಂಗ್': ಗೃಹ ಸಚಿವ ಡಾ. ಜಿ. ಪರಮೇಶ್ವರ್
ಮಂಗಳೂರು, ಜೂ.6: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಅನೈತಿಕ ಪೊಲೀಸ್‌ಗಿರಿ ಮಟ್ಟ ಹಾಕಲು ‘ಆ್ಯಂಟಿ ಕಮ್ಯುನಲ್ ವಿಂಗ್’ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆ್ಯಂಟಿ ಕಮ್ಯುನಲ್ ವಿಂಗ್ ಗೆ ಈಗ ಇರುವ ಅಧಿಕಾರಿಗಳಲ್ಲಿ ಸಮರ್ಥರನ್ನು ಆಯುಕ್ತರು ನಿಯೋಜಿಸಲಿದ್ದಾರೆ. ಪ್ರಾಯೋಗಿಕವಾಗಿ ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ನ್ನು ಅನುಷ್ಠಾನಗೊಳಿಸಲಾಗುವುದು. ಇಲ್ಲಿ ಈ ಯೋಜನೆ ಯಶಸ್ವಿಯಾದರೆ, ದ.ಕ.ಜಿಲ್ಲೆಗೆ ಹಾಗೂ ಅಗತ್ಯ ಇದ್ದರೆ ಇಡೀ ರಾಜ್ಯದಲ್ಲಿ ಆರಂಭಿಸಲಾಗುವುದು ಎಂದರು.
ಕೋಮು ಸೌಹಾರ್ದತೆಯನ್ನು ಕಾಪಾಡಲು ಸರಕಾರ ಹೆಚ್ಚಿನ ಆದ್ಯತೆ ನೀಡಲಾಗುವುದು. ಕರಾವಳಿಯಲ್ಲಿ ಅನೈತಿಕ ಪೊಲೀಸ್‌ಗಿರಿ ಪ್ರಕರಣಗಳು ಆಗಾಗ ನಡೆಯುತ್ತಿವೆ. ವಿದ್ಯಾವಂತರ ಮತ್ತು ಬುದ್ಧಿವಂತರ ಜಿಲ್ಲೆಗೆ ಇದೊಂದು ಕಪ್ಪು ಚುಕ್ಕೆಯಾಗಿದೆ ಎಂದು ಹೇಳಿದರು.
ಡ್ರಗ್ಸ್ ನಿಯಂತ್ರಣಕ್ಕೆ ಸೂಚಿಸಲಾಗಿದ್ದು, ಆಗಸ್ಟ್ 15ರ ತನಕ ಡ್ರಗ್ಸ್ ನಿಯಂತ್ರಣಕ್ಕೆ ಗಡುವು ವಿಧಿಸಲಾಗಿದೆ ಎಂದರು.
ಹತ್ಯೆಗೀಡಾಗಿರುವ ಫಾಝಿಲ್, ಮಸೂದ್, ಜಲೀಲ್ ಕುಟಂಬಗಳಿಗೆ ಪರಿಹಾರ ಒದಗಿಸಲು ಸರಕಾರ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಪಶ್ಚಿಮ ವಲಯ ಡಿಐಜಿ ಡಾ.ಚಂದ್ರಗುಪ್ತ, ಮಂಗಳೂರು ನಗರ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಉಪಸ್ಥಿತರಿದ್ದರು.