ಉತ್ತರ ಪ್ರದೇಶ: ಪ್ರಯಾಣಿಕರು ನಮಾಝ್ ಮುಗಿಸುವವರೆಗೆ ಕಾದ ಬಸ್ ಚಾಲಕ, ಸಹಾಯಕ ಅಮಾನತು
ಲಕ್ನೋ: ಇಬ್ಬರು ಪ್ರಯಾಣಿಕರಿಗೆ ನಮಾಝ್ ಮಾಡಲು ಅವಕಾಶ ಕಲ್ಪಿಸಲು ಬಸ್ಸನ್ನು ನಿಲ್ಲಿಸಿದ್ದಾರೆಂದು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸಿನ ಚಾಲಕ ಮತ್ತು ಆತನ ಸಹಾಯಕನೊಬ್ಬನನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಘಟನೆ ಜೂನ್ 4 ರಂದು ನಡೆದಿದೆ. ಬಸ್ ಬರೇಲಿ ಟರ್ಮಿನಲ್‌ನಿಂದ ನಿರ್ಗಮಿಸಿ ರಾಮಪುರ್ ಜಿಲ್ಲೆಯ ಮಿಲಕ್ ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿ 24ರಲ್ಲಿ ನಿಂತಿತ್ತು. ಆ ಸಂದರ್ಭ ಬಸ್ಸಿನಲ್ಲಿ 14 ಪ್ರಯಾಣಿಕರಿದ್ದರು.
ರಸ್ತೆಬದಿಯಲ್ಲಿದ್ದ ಶೌಚಾಲಯಕ್ಕೆ ತೆರಳಲು ಕೆಲ ಪ್ರಯಾಣಿಕರು ಬಯಸಿದ್ದರಿಂದ ಬಸ್ಸನ್ನು ನಿಲ್ಲಿಸಿದೆ ಎಂದು ಚಾಲಕ ಕೆ ಪಿ ಸಿಂಗ್ ತಿಳಿಸಿದ್ದನೆನ್ನಲಾಗಿದೆ. ಆಗ ಇಬ್ಬರು ಪ್ರಯಾಣಿಕರು ತಮಗೆ ನಮಾಝ್ ಸಲ್ಲಿಸಬೇಕೆಂದಾಗ ಸಿಂಗ್ ಅದಕ್ಕೆ ಒಪ್ಪಿ ಅವರು ನಮಾಝ್ ಸಲ್ಲಿಸುವ ತನಕ ಇನ್ನೂ ಕೆಲ ನಿಮಿಷಗಳ ಕಾಲ ಬಸ್ಸನ್ನು ನಿಲ್ಲಿಸಿದ್ದರು.
ಆದರೆ ಇಬ್ಬರು ಪ್ರಯಾಣಿಕರು ನಮಾಝ್ ಸಲ್ಲಿಸಿ ಮುಗಿಸಲು ಚಾಲಕ ಕಾಯುತ್ತಿದ್ದಾನೆಂದು ತಿಳಿದು ಇತರ ಪ್ರಯಾಣಿಕರು ಪ್ರತಿಭಟಿಸಿದ್ದರು. ಒಬ್ಬ ಪ್ರಯಾಣಿಕ ಈ ಘಟನೆಯ ವೀಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ನಮಾಝ್ ಸಲ್ಲಿಸಲು ಅನುಕೂಲ ಕಲ್ಪಿಸಲೆಂದೇ ಬಸ್ಸನ್ನು ನಿಲ್ಲಿಸಲಾಗಿತ್ತು ಎಂದು ಬರೆದಿದ್ದಾರೆ.
ಸಂಚಾರ ದಟ್ಟಣೆಯ ಹೆದ್ದಾರಿಯಲ್ಲಿ ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರ ಸುರಕ್ಷತೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಪ್ರಾಥಮಿಕ ತನಿಖೆ ದೃಢಪಟ್ಟ ನಂತರ ಸಿಂಗ್ ಮತ್ತು ಯಾದವ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ನಿಗಮದ ಪ್ರಾದೇಶಿಕ ಪ್ರಬಂಧಕ ದೀಪಕ್ ಚೌಧುರಿ ಹೇಳಿದ್ದಾರೆ.
ನಮಾಝ್ ಸಲ್ಲಿಸಿದ್ದ ಪ್ರಯಾಣಿಕ, ಗುಜರಾತ್‌ನ ಅಹ್ಮದಾಬಾದ್ ನಿವಾಸಿ ಹುಸೈನ್ ಮನ್ಸೂರಿ ಈ ಕುರಿತು ಪ್ರತಿಕ್ರಿಯಿಸಿ ಚಾಲಕ ಮತ್ತು ಸಹಾಯಕನ ವಿರುದ್ಧದ ಕ್ರಮ ಅಚ್ಚರಿ ತಂದಿದೆ ಎಂದಿದ್ದಾರೆ.
ನನಗೆ ದಿಲ್ಲಿಯಲ್ಲಿ ರೈಲು ಹತ್ತಬೇಕಿತ್ತು, ಸಮಯಕ್ಕೆ ಸೆರಿಯಾಗಿ ತಲುಪಿದೆ. ಬಸ್ಸನ್ನು ಇತರ ಪ್ರಯಾಣಿಕರಿಗಾಗಿಯೂ ನಿಲ್ಲಿಸಲಾಗಿತ್ತು. ಚಾಲಕ ಮತ್ತಾತನ ಸಹಾಯಕನಿಗೆ ಅಗತ್ಯ ಸಹಾಯ ಮಾಡಲು ಸಿದ್ಧ ಎಂದು ಅವರು ಹೇಳಿದ್ದಾರೆ.
ತಮ್ಮ ವಿರುದ್ಧದ ಕ್ರಮವನ್ನು ಪ್ರಶ್ನಿಸುವದಾಗಿ ಚಾಲಕ ಮತ್ತು ಸಹಾಯಕ ಹೇಳಿದ್ದಾರೆ. ಬಸ್ಸು ಉದ್ಯೋಗಿಗಳ ಕಲ್ಯಾಣ ಸಂಘ ಕೂಡ ಅವರ ವಿರುದ್ಧದ ಕ್ರಮಕ್ಕೆ ಆಕ್ಷೇಪಿಸಿದೆ.