ರಾಜೇಂದ್ರ ಕುಮಾರ್‌ರಿಗೆ ಮದರ್ ತೆರೇಸಾ ಮೆಮೊರಿಯಲ್ ನ್ಯಾಷನಲ್ ಅವಾರ್ಡ್

ಮಂಗಳೂರು: ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ದಿ. ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಬೆಂಗಳೂರು ಇದರ ವತಿಯಿಂದ ನೀಡಿದ ಪ್ರತಿಷ್ಠಿತ 'ಮದರ್ ತೆರೇಸಾ ಮೆಮೊರಿಯಲ್ ನ್ಯಾಷನಲ್ ಅವಾರ್ಡ'ನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮಂಗಳವಾರ ಬೆಂಗಳೂರಿ ನಲ್ಲಿ ಸ್ವೀಕರಿಸಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ದಿ. ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ, ಬೆಂಗಳೂರು ಇದರ ಸಹಯೋಗದಲ್ಲಿ ನಡೆದ ಅಂತಾ ರಾಷ್ಟ್ರೀಯ ದಾದಿಯರ ದಿನಾಚರಣೆಯ ಸಮಾರಂಭದಲ್ಲಿ ಆಂಧ್ರ ಪ್ರದೇಶದ ರಾಜ್ಯಪಾಲರಾದ ಜಸ್ಟೀಸ್ ಅಬ್ದುಲ್ ನಝೀರ್ ಅವರು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಮದರ್ ತೆರೇಸಾ ಮೆಮೊರಿಯಲ್ ನ್ಯಾಷನಲ್ ಅವಾರ್ಡ್ ನ್ನು ಪ್ರದಾನ ಮಾಡಿದರು.
ಸಾರ್ಥಕ ಸೇವೆ: ಸಹಕಾರ ಕ್ಷೇತ್ರದಲ್ಲಿ ಕಳೆದ ನಾಲ್ಕೂವರೆ ದಶಕಗಳ ಕಾಲ ಸಾರ್ಥಕ ಸೇವೆಯನ್ನುಗೈದಿರುವ ಡಾ.ಎಂ.ಎನ್.ರಾಜೇಂದ್ರ ಕುಮಾರ್ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ್ನು ಕಳೆದ 29 ವರ್ಷ ಗಳಿಂದ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿದ ಇವರು ಸಹಕಾರಿ ರಂಗಕ್ಕೆ ಹೊಸ ಆಯಾಮ ವನ್ನು ತಂದುಕೊಟ್ಟವರು.
ಕೋರ್ ಬ್ಯಾಂಕಿಂಗ್ ನಂತಹ ಉತ್ಕೃಷ್ಟ ತಂತ್ರಜ್ಞಾನವನ್ನು ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ಅಳವಡಿಸಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿದ ಶ್ರೇಯಸ್ಸು ರಾಜೇಂದ್ರ ಕುಮಾರ್ ಅವರದ್ದು. ಬ್ಯಾಂಕ್ ಶಾಖೆ ಇಲ್ಲದ ಪ್ರದೇಶ ಗಳಲ್ಲಿ ಸುಸಜ್ಜಿತ ವಾಹನದಲ್ಲಿ ಮೊಬೈಲ್ ಬ್ಯಾಂಕ್ ಸೇವೆಯನ್ನು ಎಸ್ ಸಿಡಿಸಿಸಿ ಬ್ಯಾಂಕ್ ಜನರಿಗೆ ನೀಡುತ್ತಿದೆ. ಸಹಕಾರ, ಸಾಮಾಜಿಕ, ಬ್ಯಾಂಕಿಂಗ್, ಧಾರ್ಮಿಕ... ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧಕರಾಗಿ, ನವೋದಯ ಸ್ವ ಸಹಾಯ ಸಂಘಗಳ ಹರಿಕಾರರಾಗಿ ಅಪೂರ್ವ ಪರಂಪರೆಯನ್ನು ರೂಪಿಸಿದ ಹೆಗ್ಗಳಿಕೆ ರಾಜೇಂದ್ರ ಕುಮಾರ್ ಅವರದ್ದು. ಇವರು ಸಹಕಾರ ಕ್ಷೇತ್ರ ಮತ್ತು ಸಾಮಾಜಿಕ ಸೇವಾ ವಲಯದಲ್ಲಿ ಗೈದ ಅನುಪಮ ಸಮಾಜ ಸೇವೆಗೆ ಇದೀಗ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮದರ್ ತೆರೇಸಾ ಅವರ ಸ್ಮರಣಾರ್ಥ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಸ್ಟರ್ ಆಗ್ನೇಸ್, ಬೆಂಗಳೂರು ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷೆ ಡಿ.ಎ. ಕಲ್ಪಜ, ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ.ಡಾ.ಎಸ್.ಚಂದ್ರಶೇಖರ್ ಶೆಟ್ಟಿ, ಭಾರತ ಸರ್ಕಾರದ ನಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ, ತುಮಕೂರು ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಸಂಸ್ಥೆಯ ಉಪಕುಲಪತಿ ಕೆ.ಬಿ.ಲಿಂಗೇ ಗೌಡ, ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಇದರ ರಿಜಿಸ್ಟರ್ ಪ್ರಸನ್ನ ಕುಮಾರ್, ಆಕ್ಸ್ ಫರ್ಡ್ ಮೆಡಿಕಲ್ ಕಾಲೇಜು ಅಧ್ಯಕ್ಷರಾದ ಎಸ್.ಎನ್.ವಿ.ಎಲ್.ನರಸಿಂಹ ರಾಜು, ಇಂಡಿಯನ್ ಆರ್ಮಿಯ ಮಾಜಿ ಅಧಿಕಾರಿ ಮೇಜರ್ ಜನರಲ್ ವಿಪಿಎಸ್. ಭಕುನಿ, ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಇದರ ಸ್ಥಾಪಕ ಅಧ್ಯಕ್ಷ ಶ್ರಾವಣ ಲಕ್ಷ್ಮಣ್, ಹಾಗೂ ಎಸ್ ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಮೊದಲಾದವರು ಉಪಸ್ಥಿತರಿದ್ದರು.