ಅರಬಿ ಸಮುದ್ರದಲ್ಲಿನ ವಾಯುಭಾರ ಕುಸಿತವು ಚಂಡಮಾರುತವಾಗುವ ಸಾಧ್ಯತೆ: ಐಎಂಡಿ
ಹೊಸದಿಲ್ಲಿ: ಗುಜರಾತಿನ ಪೋರಬಂದರ್ ದಕ್ಷಿಣಕ್ಕೆ ಆಗ್ನೇಯ ಅರಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ವಾಯುವ್ಯದತ್ತ ಚಲಿಸುವ ಮತ್ತು ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)ಯು ಮಂಗಳವಾರ ಎಚ್ಚರಿಕೆ ನೀಡಿದೆ.
ಮಂಗಳವಾರ ಬೆಳಿಗ್ಗೆ 5:30ಕ್ಕೆ ವಾಯುಭಾರ ಕುಸಿತವು ಗೋವಾದ ಪಶ್ಚಿಮ-ನೈಋತ್ಯಕ್ಕೆ ಸುಮಾರು 920 ಕಿ.ಮೀ., ಮುಂಬೈನ ದಕ್ಷಿಣ-ನೈಋತ್ಯಕ್ಕೆ 1,120 ಕಿ.ಮೀ., ಪೋರಬಂದರ್ ನಿಂದ ದಕ್ಷಿಣಕ್ಕೆ 1,160 ಕಿ.ಮೀ. ಮತ್ತು ಪಾಕಿಸ್ತಾನದ ಕರಾಚಿಯ ದಕ್ಷಿಣಕ್ಕೆ 1,520 ಕಿ.ಮೀ.ದೂರದಲ್ಲಿ ಸ್ಥಿತಗೊಂಡಿತ್ತು ಎಂದು ಐಎಂಡಿ ತನ್ನ ಇತ್ತೀಚಿನ ಬುಲೆಟಿನ್ ನಲ್ಲಿ ತಿಳಿಸಿದೆ.
ವಾಯುಭಾರ ಕುಸಿತವು ಮುಂದಿನ 24 ಗಂಟೆಗಳಲ್ಲಿ ಉತ್ತರದತ್ತ ಚಲಿಸುವ ಹಾಗೂ ಪೂರ್ವ-ಮಧ್ಯ ಅರಬಿ ಸಮುದ್ರ ಮತ್ತು ಪಕ್ಕದ ಆಗ್ನೇಯ ಅರಬಿ ಸಮುದ್ರದ ಮೇಲೆ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.
ಆಗ್ನೇಯ ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಮತ್ತು ಅದರ ತೀವ್ರತೆಯು ಕೇರಳ ಕರಾವಳಿಯತ್ತ ಮುಂಗಾರು ಮಳೆಯ ಆಗಮನದ ಮೇಲೆ ನಿರ್ಣಾಯಕ ಪ್ರಭಾವ ಬೀರುವ ನಿರೀಕ್ಷೆಯಿದೆ ಎಂದು ಐಎಂಡಿ ಸೋಮವಾರ ಹೇಳಿತ್ತು. ಆದರೆ ಕೇರಳದಲ್ಲಿ ಮಳೆಯ ಆಗಮನಕ್ಕಾಗಿ ಯಾವುದೇ ತಾತ್ಕಾಲಿಕ ದಿನಾಂಕವನ್ನು ಅದು ನೀಡಿಲ್ಲ.
ಮುಂಗಾರು ಮಳೆ ಜೂ.8 ಅಥವಾ ಜೂ.9ರಂದು ಕೇರಳವನ್ನು ಪ್ರವೇಶಿಸಬಹುದು ಮತ್ತು ಅದು ಸೌಮ್ಯ ಸ್ವರೂಪದ್ದಾಗಿರಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ವೆದರ್ ಹೇಳಿದೆ.
ಅರಬಿ ಸಮುದ್ರದಲ್ಲಿ ಉಂಟಾಗಿರುವ ಪ್ರಬಲ ಹವಾಮಾನ ವೈಪರೀತ್ಯಗಳು ಆಳವಾದ ಒಳನಾಡಿನಲ್ಲಿ ಮಳೆಯ ಮುನ್ನಡೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಲಿವೆ. ಅವುಗಳ ಪ್ರಭಾವದಿಂದಾಗಿ ಮುಂಗಾರು ಕರಾವಳಿ ಭಾಗಗಳನ್ನು ತಲುಪಿದರೂ ಪಶ್ಚಿಮ ಘಟ್ಟಗಳನ್ನು ದಾಟುವುದು ಸುಲಭವಾಗುವುದಿಲ್ಲ ಎಂದು ಅದು ತಿಳಿಸಿದೆ.
ಜೂನ್ ಏಳಕ್ಕೆ ಕೇರಳದಲ್ಲಿ ಮಳೆಗಾಲ ಆರಂಭವಾಗಲಿದೆ. ಇದು ಮೂರು ದಿನ ಹೆಚ್ಚು ಅಥವಾ ಕಡಿಮೆಯಾಗಬಹುದು ಎಂದು ಸ್ಕೈಮೆಟ್ ಈ ಮೊದಲು ತಿಳಿಸಿತ್ತು.
ಸಾಮಾನ್ಯವಾಗಿ ಕೇರಳದಲ್ಲಿ ಏಳು ದಿನಗಳ ಹೆಚ್ಚುಕಡಿಮೆಯ ಸಾಧ್ಯತೆಯೊಂದಿಗೆ ಜೂ.1ರಂದು ಮುಂಗಾರು ಮಳೆ ಆರಂಭಗೊಳ್ಳುತ್ತದೆ.
ಕೇರಳದಲ್ಲಿ ಮುಂಗಾರು ಮಳೆ ಆರಂಭದಲ್ಲಿ ಕೊಂಚ ವಿಳಂಬವಾಗುತ್ತದೆ ಎಂದರೆ ಅದು ದೇಶದ ಇತರ ಭಾಗಗಳನ್ನೂ ವಿಳಂಬವಾಗಿ ತಲುಪುತ್ತದೆ ಎಂದು ಅರ್ಥವಲ್ಲ. ಅದು ಮಳೆಗಾಲದ ಋತುವಿನಲ್ಲಿ ದೇಶದ ಒಟ್ಟಾರೆ ಮಳೆ ಪ್ರಮಾಣದ ಮೇಲೆ ಪರಿಣಾಮವನ್ನುಂಟು ಮಾಡುವುದಿಲ್ಲ ಎಂದು ತಿಳಿಸಿರುವ ಐಎಂಡಿ, ಈ ವರ್ಷದಲ್ಲಿ ದೇಶದಲ್ಲಿ ವಾಡಿಕೆಯ ಮಳೆಯಾಗಲಿದೆ ಎಂದು ನಿರೀಕ್ಷಿಸಿದೆ.