ಸಾರ್ವಜನಿಕ ಭಾಷಣದಲ್ಲಿ ಭಾವನಾತ್ಮಕ ವಿಷಯಕ್ಕೆ ಒತ್ತು: ಪ್ರೊ.ರಾಕೇಶ್
ಉಡುಪಿ, ಜೂ.6: ಸ್ವಾತಂತ್ರೋತ್ತರ ಭಾರತದ ರಾಜಕೀಯ ಸನ್ನಿವೇಶದಲ್ಲಿ ಸಾರ್ವಜನಿಕ ಭಾಷಣದ ಸ್ವರೂಪವು ಸಾಮಾಜಿಕ-ಆರ್ಥಿಕ ಸಮಸ್ಯೆಗಳಿಂದ ವಿಮುಖವಾಗಿ ಹೆಚ್ಚು ಭಾವನಾತ್ಮಕ ವಿಷಯಗಳಿಗೆ ಬದಲಾಗಿದೆ ಎಂದು ಹೊಸದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಬರಹಗಾರ, ವಿದ್ವಾಂಸ ಪ್ರೊ.ರಾಕೇಶ್ ಬಟ್ಯಾಲ್ ಹೇಳಿದ್ದಾರೆ.
ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ‘ಭಾರತದಲ್ಲಿ ಸಾರ್ವಜನಿಕ ಭಾಷಣದ ಸ್ವರೂಪ 1947-2022’ ಎಂಬ ವಿಷಯದ ಕುರಿತು ಅವರು ಮಾತನಾಡುತಿದ್ದರು.
ತಮ್ಮ ಉಪನ್ಯಾಸದಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರ ಭಾಷಣಗಳನ್ನು ವಿಶ್ಲೇಷಿಸಿದ ಪ್ರೊ.ರಾಕೇಶ್, ಮೊದಲು ದೇಶದ ಸಾಮಾಜಿಕ- ಆರ್ಥಿಕ ಸಮಸ್ಯೆಗಳು ಹೇಗೆ ಸಾರ್ವಜನಿಕ ಭಾಷಣದ ಪ್ರಮುಖ ಅಂಶಗಳಾ ಗಿದ್ದವು ಎಂಬುದನ್ನು ಪ್ರದರ್ಶಿಸಿದರು.
ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ 1990ರ ಬಳಿಕ ಸಾಮಾಜಿಕ ಭಾಷಣದ ಸ್ವರೂಪವು ಹೇಗೆ ಹೆಚ್ಚೆಚ್ಚು ಭಾವನಾತ್ಮಕ ವಿಚಾರಗಳಿಗೆ ತಿರುಗಿತು. ಇಂಥ ವಿಷಯಗಳಿಗೆ ಹೆಚ್ಚಿನ ಪ್ರಾದಾನ್ಯತೆ ದೊರೆಯ ಲಾರಂಭಿಸಿತು ಎಂಬುದನ್ನು ಅವರು ವಿಶ್ಲೇಷಿಸಿದರು.
ರಾಜಕೀಯ ನಾಯಕರ ಮಹತ್ವದ ಭಾಷಣಗಳ ಕುರಿತ ಪುಸ್ತಕವೊಂದನ್ನು ಇತ್ತೀಚೆಗೆ ಸಂಪಾದಿಸಿರುವ ಪ್ರೊ. ರಾಕೇಶ್, ಅನೇಕ ಬಾರಿ ನಾಯಕರು ರಾಜಕೀಯ ಲಾಭಕ್ಕಾಗಿ ಜನರ ಆತಂಕಗಳನ್ನು ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಪ್ರೊ.ಫಣಿರಾಜ್, ಡಾ.ರೇಸ್ಮಿ ಭಾಸ್ಕರನ್, ಋತುರಾಜ್ ಹಾಗೂ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.