ಚಿಕ್ಕಮಗಳೂರು: ಕಾರ್ಮಿಕ ಮಹಿಳೆಯ ಮೇಲೆ ಹುಲಿ ದಾಳಿ; ಗಂಭೀರ ಗಾಯ
ಚಿಕ್ಕಮಗಳೂರು, ಜೂ.6: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆ ಮೇಲೆ ಹುಲಿಯೊಂದು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಪಂಡರವಳ್ಳಿ ಗ್ರಾಮದಲ್ಲಿನ ಕಾಫಿತೋಟದಲ್ಲಿ ಮಂಗಳವಾರ ನಡೆದಿದೆ.
ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಎಂದಿನಂತೆ ಕಾಫಿತೋಟಕ್ಕೆ ಕೆಲಸಕ್ಕೆ ತೆರಳಿದ್ದರು. ಕೆಲಸ ಮಾಡುವ ವೇಳೆ ಪೊದೆಯಲ್ಲಿ ಅವಿತುಕೊಂಡಿದ್ದ ಹುಲಿ ಏಕಾಏಕಿ ಮಹಿಳೆ ಮೇಲೆ ದಾಳಿ ಮಾಡಿದೆ. ಹುಲಿ ದಾಳಿಯಿಂದ ಮಹಿಳೆಯ ಹಣೆ ಮತ್ತು ಮುಖಕ್ಕೆ ಗಂಭೀರ ಗಾಯವಾಗಿದೆ. ಮಹಿಳೆ ಮೇಲೆ ಹುಲಿ ದಾಳಿ ನಡೆಸುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಕಾರ್ಮಿಕರು ಕೂಗಾಡಿದ್ದರಿಂದ ಹುಲಿ ಅಲ್ಲಿಂದ ಓಡಿ ಹೋಗಿದೆ ಎಂದು ತಿಳಿದು ಬಂದಿದೆ.
ಹುಲಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಕಾರ್ಮಿಕ ಮಹಿಳೆಯನ್ನು ತಕ್ಷಣ ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರಕಾರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಡಿಎಫ್‍ಒ ಕ್ರಾಂತಿ ಭೇಟಿ ನೀಡಿ ಕಾರ್ಮಿಕ ಮಹಿಳೆಯ ಆರೋಗ್ಯ ವಿಚಾರಿಸಿದ್ದಾರೆ. ಈ ಗ್ರಾಮದಲ್ಲಿ ಕಳೆದ 8ವರ್ಷಗಳ ಹಿಂದೆ ಹುಲಿಯೊಂದು ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದ್ದು, ಮಹಿಳೆ ಮೃತಪಟ್ಟಿದ್ದರು. ಇದೀಗ ಮತ್ತೆ ಇದೇ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷವಾಗಿ ಕಾರ್ಮಿಕ ಮಹಿಳೆ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.