ರಶ್ಯದಿಂದ ಅಣೆಕಟ್ಟು ಸ್ಫೋಟ: ಉಕ್ರೇನ್ ಆರೋಪ
ಅಪಾಯದಲ್ಲಿ ಝಪೊರಿಜ್ಝಿಯಾ ಅಣುವಿದ್ಯುತ್ ಸ್ಥಾವರ: ಸಾವಿರಾರು ಜನರ ಸ್ಥಳಾಂತರಕ್ಕೆ ಆದೇಶ

ಕೀವ್,ಜೂ.6:ಯುದ್ಧ ಗ್ರಸ್ತ ದಕ್ಷಿಣ ಉಕ್ರೇನ್ನಲ್ಲಿ ರಶ್ಯ ಸೇನೆಯ ನಿಯಂತ್ರಣದಲ್ಲಿರುವ ಪ್ರದೇಶದ ಪ್ರಮುಖ ಅಣೆಕಟ್ಟು ಹಾಗೂ ಜಲವಿದ್ಯುತ್ ಸ್ಥಾವರವನ್ನು ರಶ್ಯನ್ ಪಡೆಗಳು ಸ್ಪೋಟಿಸಿವೆಯೆಂದು ಉಕ್ರೇನ್ ಮಂಗಳವಾರ ಆಪಾದಿಸಿದೆ.
ಒಡೆದ ಅಣೆಕಟ್ಟಿನಿಂದ ನೀರು ಭಾರೀ ಪ್ರಮಾಣದಲ್ಲಿ ಹರಿದುಹೋಗುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆಯೆಂದು ಹೇಳಿದೆ. ಇದೊಂದು ಭೀಕರವಾದ ಪ್ರಾಕೃತಿಕ ವಿಕೋಪವಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ಅದು ಆತಂಕ ವ್ಯಕ್ತಪಡಿಸಿದೆ, ಪ್ರವಾಹ ಪರಿಸ್ಥಿತಿಯುಂಟಾಗಿರುವ ಹಿನ್ನೆಲೆಯಲ್ಲಿ ಉಕ್ರೇನ್ ಹಾಗೂ ರಶ್ಯದ ಸೇನೆಗಳ ಅಧಿಕಾರಿಗಳು, ತಮ್ಮ ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳ ಸಾವಿರಾರು ಜನರ ಸ್ಥಳಾಂತರಕ್ಕೆ ಆದೇಶಿಸಿದ್ದಾರೆ.
ಅಣೆಕಟ್ಟಿನ ಸ್ಪೋಟವು ಯುರೋಪ್ನ ಅತಿ ದೊಡ್ಡ ಅಣುಶಕ್ತಿ ಸ್ಥಾವರವೆನಿಸಿರುವ ಝಪೊರಿಝ್ಝಿಯಾದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆಯೆಂದು ಅವರು ಹೇಳಿದ್ದಾರೆ. ಆದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆಯೆಂದು ಉಕ್ರೇನ್ನ ಅಣುಶಕ್ತಿ ನಿರ್ವಹಣಾ ಸಂಸ್ಥೆ ಎನರ್ಗೊವಾಟಮ್ ತಿಳಿಸಿದೆ.
ಝಪೊರಿಜ್ಝಿಯಾದ ಅಣುಸ್ಥಾವದ ಪರಿಸ್ಥಿತಿಯ ಬಗ್ಗೆ ತಾನು ನಿಕಟವಾದ ನಿಗಾವಿರಿಸಿರುವುದಾಗಿ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ) ಟ್ವೀಟ್ ಮಾಡಿದೆ.
ಅಣೆಕಟ್ಟು ಭಗ್ನಗೊಂಡಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ನಿಭಾಯಿಸುವ ಕುರಿತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ತುರ್ತು ಸಭೆ.ಯೊಂದನ್ನು ಕರೆದಿದ್ದಾರೆಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.