ಮೋದಿ ಕಲಿತ ಶಾಲೆಯಲ್ಲಿ ʻಪ್ರೇರಣೆʼಗಾಗಿ ಒಂದು ವಾರ ಅಧ್ಯಯನ ಕೈಗೊಳ್ಳಲಿರುವ ದೇಶದ ಪ್ರತಿ ಜಿಲ್ಲೆಯ 2 ವಿದ್ಯಾರ್ಥಿಗಳು

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಾಥಮಿಕ ಶಿಕ್ಷಣ ಪಡೆದ ಗುಜರಾತ್‌ನ ಮೆಹ್ಸಾನ ಜಿಲ್ಲೆಯ ವಾಡ್ನಗರ್ ಎಂಬಲ್ಲಿರುವ ಪ್ರಾಥಮಿಕ ಶಾಲೆಗೆ ಮುಂದಿನ ಎರಡು ವರ್ಷ ಭಾರತದ ಪ್ರತಿ ಜಿಲ್ಲೆಯ ಇಬ್ಬರು ಮಕ್ಕಳನ್ನು ಆರಿಸಿ ಒಂದು ವಾರದ ಅಧ್ಯಯನ ಪ್ರವಾಸಕ್ಕೆ ಅಲ್ಲಿಗೆ ಕರೆದೊಯ್ಯಲಾಗುವುದು.
ಈ ಶಾಲೆಯನ್ನು “ಪ್ರೇರಣಾ” ಎಂದು ಸ್ಪೂರ್ತಿದಾಯಕ ಶಾಲೆಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸರಕಾರ ತಿಳಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಯೋಜನೆಯ ಭಾಗವಾಗಿ ವಿದ್ಯಾರ್ಥಿಗಳಿಗೆ ಅರ್ಥಪೂರ್ಣ ಜೀವನ ನಡೆಸುವ ಕುರಿತು ತರಬೇತಿ ನೀಡಲಾಗುವುದು.
2018 ತನಕ ಕಾರ್ಯಾಚರಿಸಿದ್ದ ಈ ಶಾಲೆಯನ್ನು ಭಾರತದ ಪುರಾತತ್ವ ಸರ್ವೇಕ್ಷಣಾ ಇಲಾಖೆ ನವೀಕರಿಸಿದೆ. ಈ 19ನೇ ಶತಮಾನದ ಶಾಲೆ ನವೀಕರಣಗೊಂಡ ನಂತರ ಈ ವರ್ಷ ತನ್ನ ಮೊದಲನೇ ಬ್ಯಾಚಿನ ವಿದ್ಯಾರ್ಥಿಗಳನ್ನು ಪಡೆಯಲಿದೆ.
ಪ್ರತಿ ಬ್ಯಾಚಿನಲ್ಲಿ 30 ವಿದ್ಯಾರ್ಥಿಗಳಿರಲಿದ್ದು ಅವರಿಗೆ ಒಂದು ವಾರದ ವಸತಿ ಸಹಿತ ತರಬೇತಿ ನೀಡಲಾಗುವುದು. ವಿದ್ಯಾರ್ಥಿಗಳ ಪ್ರಯಾಣ ಮತ್ತು ವಸತಿ ವೆಚ್ಚವನ್ನು ಸಂಸ್ಕೃತಿ ಸಚಿವಾಲಯ ಭರಿಸಲಿದೆ.
ಭಾರತದಲ್ಲಿರುವ 750 ಜಿಲ್ಲೆಗಳಿಂದ ತಲಾ 2 ವಿದ್ಯಾರ್ಥಿಗಳನ್ನು ಆರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂಬತ್ತು ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳನ್ನು ಆರಿಸಲಾಗುವುದು ಎಂದು ಹೇಳಲಾಗಿದೆ.
ವಾಡ್ನಗರದ ಕುಮಾರ್ ಶಾಲಾ ನಂ. 1 ಎಂದು ಮೂಲತಃ ಕರೆಯಲ್ಪಡುತ್ತಿದ್ದ ಈ ಶಾಲೆಯನ್ನು 1888ರಲ್ಲಿ ಸ್ಥಾಪಿಸಲಾಗಿತ್ತು. 2018ರ ನಂತರ ಅದರ ನವೀಕರಣ ಕೆಲಸವನ್ನು ಮೂಲಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಡೆಸಲಾಗಿದೆ.
ಕೇಂದ್ರ ಸರ್ಕಾರದ ಧನಸಹಾಯದೊಂದಿಗೆ ವಾಡ್ನಗರ್ ಅನ್ನು ಗುಜರಾತ್‌ನ ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿಗೊಳಿಸುವ ಯೋಜನೆಯೂ ಇದೆ.