ಬಿಹಾರದ ಕುಸಿಯುತ್ತಿರುವ ಸೇತುವೆಗಳು: ಕಳೆದ ಮೂರು ವರ್ಷಗಳಲ್ಲಿ 10 ಸೇತುವೆಗಳು ನೀರುಪಾಲು
ಪಾಟ್ನಾ: ಬಿಹಾರದಲ್ಲಿ ನಿರ್ಮಾಣ ಹಂತದಲ್ಲಿರುವ ಸುಲ್ತಾನ್ ಗಂಜ್-ಅಗುವಾನಿ ಸೇತುವೆಯು ಜೂ.4ರಂದು ಎರಡನೇ ಬಾರಿಗೆ ಕುಸಿದು ಬಿದ್ದಿದೆ. ರಾಜ್ಯದ ರಸ್ತೆ ನಿರ್ಮಾಣ ಇಲಾಖೆ (RCD)ಯು ನಿರ್ಮಾಣ ಕಂಪನಿಗೆ ಶೋಕಾಸ್ ನೋಟಿಸ್ ಅನ್ನು ಹೊರಡಿಸಿದೆ. ಇದೇ ವೇಳೆ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 9 ಇತರ ಸೇತುವೆಗಳು ಕುಸಿದಿರುವುದನ್ನು ದಾಖಲೆಗಳು ತೋರಿಸುತ್ತಿವೆ ಎಂದು thehindu.com ವರದಿ ಮಾಡಿದೆ.
ಎಸ್ಪಿ ಸಿಂಗ್ಲಾ ಕನ್ಸ್ಟ್ರಕ್ಷನ್ಸ್ ಪ್ರೈ.ಲಿ.ಗೆ ಹೊರಡಿಸಲಾಗಿರುವ ಶೋಕಾಸ್ ನೋಟಿಸ್ ನಲ್ಲಿ ಸರಕಾರವೇಕೆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬಾರದು ಎನ್ನುವುದಕ್ಕೆ 15 ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಲಾಗಿದೆ.
ಭಾಗಲ್ಪುರ ಜಿಲ್ಲೆಯ ಸುಲ್ತಾನ್ ಗಂಜ್ ಮತ್ತು ಖಗರಿಯಾ ಜಿಲ್ಲೆಯ ಅಗುವಾನಿ ನಡುವೆ ಗಂಗಾನದಿಯ ಮೇಲೆ ನಿರ್ಮಿಸಲಾಗಿದ್ದ 3.16 ಕಿ.ಮೀ.ಉದ್ದದ ಚತುಷ್ಪಥ ಸೇತುವೆಯು ಜೂ.4ರಂದು ಕುಸಿದು ಬಿದ್ದಿದೆ. ಉತ್ತರ ಮತ್ತು ದಕ್ಷಿಣ ಬಿಹಾರಗಳನ್ನು ಸಂಪರ್ಕಿಸುವ 1,716 ಕೋ.ರೂ.ವೆಚ್ಚದ ಸೇತುವೆಯು ನಿರ್ಮಾಣ ಹಂತದಲ್ಲಿ ಎರಡನೇ ಸಲ ಕುಸಿದಿದೆ. ಇದೇ ಕಂಪನಿಯು ಮೊಕಾಮಾದಲ್ಲಿ ಗಂಗಾನದಿಯ ಮೇಲೆ ಇನ್ನೊಂದು ಸೇತುವೆಯನ್ನು ನಿರ್ಮಿಸುತ್ತಿದೆ ಎನ್ನಲಾಗಿದೆ.
ಸೇತುವೆ ಕುಸಿತದ ಕುರಿತು ಐಐಟಿ-ರೂರ್ಕಿ ತನಿಖೆಯನ್ನು ನಡೆಸುತ್ತಿದ್ದು,ಅದರ ವರದಿ ಕೈಸೇರಿದ ಬಳಿಕ ಹೊಣೆಗಾರ ವ್ಯಕ್ತಿಗಳ ವಿರುದ್ಧ ಕ್ರಮವನ್ನು ಜರುಗಿಸಲಾಗುವುದು ಎಂದು ರಸ್ತೆ ನಿರ್ಮಾಣ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ ಯಾದವ ಹೇಳಿದ್ದಾರೆ. ಈ ನಡುವೆ ಪ್ರತಿಪಕ್ಷಗಳು ಸಿಬಿಐ ವಿಚಾರಣೆಗೆ ಆಗ್ರಹಿಸಿದ್ದು,ಅದರ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಸೇತುವೆ ಕುಸಿತ ಕುರಿತು ನ್ಯಾಯಾಂಗ ವಿಚಾರಣೆಯನ್ನು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯೊಂದು ಕೂಡ ಪಾಟ್ನಾ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದೆ.
ನಿರ್ಮಾಣದ ಮೇಲ್ವಿಚಾರಣೆಯ ಹೊಣೆ ಹೊತ್ತಿರುವ,ಆರ್ಸಿಡಿ ಅಧೀನದ ಬಿಹಾರ ರಾಜ್ಯ ಸೇತುವೆ ನಿರ್ಮಾಣ ನಿಗಮದ ಆಡಳಿತ ನಿರ್ದೇಶಕ ನೀರಜ್ ಸಕ್ಸೇನಾರಿಗೆ ಶೋಕಾಸ್ ನೋಟಿಸ್ ನನ್ನು ನೀಡಲಾಗಿದ್ದು,ಕರ್ತವ್ಯ ಲೋಪಕ್ಕಾಗಿ ಖಗರಿಯಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಯೋಗೇಂದ್ರ ಅವರನ್ನೂ ಅಮಾನತುಗೊಳಿಸಲಾಗಿದೆ ಎಂದು ಆರ್ಸಿಡಿಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಪ್ರತ್ಯಯ ಅಮೃತ್ ತಿಳಿಸಿದರು.
‘ಗುತ್ತಿಗೆದಾರರು ಹಾನಿಯನ್ನು ಭರಿಸಬೇಕಾಗುತ್ತದೆ ಮತ್ತು ಹಣ ವಾಪಸಾತಿಯನ್ನು ನಾವು ಖಚಿತ ಪಡಿಸಿಕೊಳ್ಳುತ್ತೇವೆ. ಹಿಂದೆ ಸೇತುವೆಯ ಕಂಬಗಳು ಕುಸಿದು ಬಿದ್ದಾಗ ಪ್ರತಿಪಕ್ಷದ ನಾಯಕನಾಗಿ ನಾನು ಅನುಮಾನವನ್ನು ವ್ಯಕ್ತಪಡಿಸಿದ್ದೆ ’ ಎಂದು ಹೇಳಿದ ಯಾದವ, ಈಗ ನಿಗದಿತ ಕಾಲಮಿತಿಯಲ್ಲಿ ಸೇತುವೆಯನ್ನು ಸಂಪೂರ್ಣವಾಗಿ ಮರು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಈ ನಡುವೆ ರಾಜ್ಯದಲ್ಲಿ ಹಲವರು ಹಿರಿಯ ಇಂಜಿನಿಯರ್ ಗಳನ್ನು ವರ್ಗಾವಣೆ ಮಾಡಲಾಗಿದೆ.
ಇದು ಕಳೆದ ಮೂರು ವರ್ಷಗಳಲ್ಲಿ ಹತ್ತನೇ ಸೇತುವೆ ಕುಸಿತವಾಗಿದೆ. 2023ರೊಂದರಲ್ಲೇ ಇದೂ ಸೇರಿದಂತೆ ಐದು ಸೇತುವೆಗಳು ಕುಸಿದು ಬಿದ್ದಿವೆ.