ಸೌದಿ ಅರೇಬಿಯದ ಅಲ್-ಇತ್ತಿಹಾದ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಕರೀಮ್ ಬೆಂಝೆಮಾ
ಹೊಸದಿಲ್ಲಿ: ಫ್ರಾನ್ಸ್ ಸ್ಟ್ರೈಕರ್, ರಿಯಲ್ ಮ್ಯಾಡ್ರಿಡ್‌ನ ಬ್ಯಾಲನ್ ಡಿಓರ್ ಪ್ರಶಸ್ತಿ ವಿಜೇತ ಆಟಗಾರ ಕರೀಮ್ ಬೆಂಝೆಮಾ ಮೂರು ವರ್ಷಗಳ ಅವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಜಿದ್ದಾ ಮೂಲದ ಫುಟ್ಬಾಲ್ ಕ್ಲಬ್ ಅಲ್-ಇತ್ತಿಹಾದ್ ಮಂಗಳವಾರ ಅಧಿಕೃತವಾಗಿ ದೃಢಪಡಿಸಿದೆ. ಈ ಮೂಲಕ ಬೆಂಝೆಮಾ ಅವರು ಸೌದಿ ಅರೇಬಿಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊರನ್ನು ಸೇರಿಕೊಳ್ಳಲಿದ್ದಾರೆ.
ಬೆಂಝೆಮಾ ಇಲ್ಲಿದ್ದಾರೆ. ಹೊಸ ಹುಲಿ ಗರ್ಜಿಸಲಿದೆ. ಇತ್ತಿಹಾದ್‌ಗೆ ಸ್ವಾಗತ ಎಂದು ಕ್ಲಬ್ ತನ್ನ ಟ್ವಿಟರ್‌ನಲ್ಲಿ ಬರೆದಿದೆ.
ಒಪ್ಪಂದದ ವಿವರಗಳನ್ನು ಅಥವಾ ಬೆಂಝೆಮಾ ಪಡೆಯಲಿರುವ ಸಂಭಾವನಯನ್ನು ಬಹಿರಂಗಪಡಿಸದ ಅಲ್-ಇತ್ತಿಹಾದ್ ಕ್ಲಬ್, ಬೆಂಝೆಮಾ ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ. ಸೋಮವಾರ ಮ್ಯಾಡ್ರಿಡ್‌ನಲ್ಲಿ ಸಹಿ ಹಾಕುವಿಕೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕಳೆದ ವರ್ಷದ ವಿಶ್ವಕಪ್‌ನ ನಂತರ ಮ್ಯಾಂಚೆಸ್ಟರ್ ಯುನೈಟೆಡ್‌ನ್ನು ತೊರೆದಿದ್ದ ಐದು ಬಾರಿ ವಿಶ್ವದ ವರ್ಷದ ಆಟಗಾರ ಪ್ರಶಸ್ತಿ ವಿಜೇತ ರೊನಾಲ್ಡೊ ಅವರು ಭಾರೀ ಮೊತ್ತಕ್ಕೆ ಅಲ್ ನಸ್ರ್ ಕ್ಲಬ್‌ನ್ನು ಸೇರಿಕೊಂಡಿದ್ದರು. ಇದೀಗ ಬೆಂಝೆಮಾ ಅವರು ರಿಯಲ್ ಮ್ಯಾಡ್ರಿಡ್‌ನ ತನ್ನ ಮಾಜಿ ಸಹ ಆಟಗಾರ ರೊನಾಲ್ಡೊರ ಹಾದಿ ಹಿಡಿದಿದ್ದಾರೆ.
ಪ್ಯಾರಿಸ್-ಸೇಂಟ್ ಜರ್ಮೈನ್ ಪರ 2 ವರ್ಷಗಳ ಕಾಲ ಆಡಿದ್ದ ಲಿಯೊನೆಲ್ ಮೆಸ್ಸಿ ಇತ್ತೀಚೆಗೆ ಆ ಕ್ಲಬ್‌ನ್ನು ತೊರೆದಿದ್ದಾರೆ. ಮೆಸ್ಸಿ ಕೂಡ ಸೌದಿ ಅರೇಬಿಯದ ಮತ್ತೊಂದು ಕ್ಲಬ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ.
ಸೌದಿ ಅರೇಬಿಯದ ಮತ್ತೊಂದು ಕ್ಲಬ್ ಅಲ್ ಹಿಲಾಲ್‌ನ ಹಿರಿಯ ಅಧಿಕಾರಿಗಳು ಫ್ರಾನ್ಸ್‌ಗೆ ತೆರಳಿ ಮೆಸ್ಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಿದ್ದಾರೆ. 35ರ ಹರೆಯದ ಅರ್ಜೆಂಟೀನದ ಆಟಗಾರ ಮೆಸ್ಸಿ ವಾರಾಂತ್ಯದಲ್ಲಿ ಪಿಎಸ್‌ಜಿ ಪರ ಕೊನೆಯ ಪಂದ್ಯವನ್ನು ಆಡಿದ್ದಾರೆ.
ಸೌದಿ ನಿಯೋಗವು ಆದಷ್ಟು ಬೇಗನೆ ಒಪ್ಪಂದವನ್ನು ಪೂರ್ಣಗೊಳಿಸುವ ಉದ್ದೇಶದಿಂದ ಮೆಸ್ಸಿಯವರ ತಂದೆ ಹಾಗೂ ಏಜೆಂಟ್ ಕೂಡ ಆಗಿರುವ ಜಾರ್ಜ್‌ರನ್ನು ಭೇಟಿಯಾಗುವ ಯೋಜನೆ ಇದೆ.
14 ವರ್ಷಗಳ ಕಾಲ ನಮ್ಮ ಕ್ಲಬ್‌ನಲ್ಲಿ ಆಡಿದ್ದ 35ರ ಹರೆಯದ ಬೆಂಝೆಮಾ ಕ್ಲಬ್‌ಗೆ ವಿದಾಯ ಹೇಳುತ್ತಿದ್ದಾರೆ ಎಂದು ರಿಯಲ್ ಮ್ಯಾಡ್ರಿಡ್ ಘೋಷಿಸಿದ ಕೆಲವೇ ದಿನಗಳಲ್ಲಿ ಬೆಂಝೆಮಾ ಸೌದಿ ಅರೇಬಿಯಾದತ್ತ ಮುಖ ಮಾಡಿದ್ದಾರೆ. 2009ರಲ್ಲಿ ಮ್ಯಾಡ್ರಿಡ್‌ಗೆ ಸೇರ್ಪಡೆಯಾಗಿದ್ದ ಬೆಂಝೆಮಾ ಒಟ್ಟು 648 ಪಂದ್ಯಗಳನ್ನು ಆಡಿದ್ದರು. 354 ಗೋಲುಗಳನ್ನು ಗಳಿಸಿ ರೊನಾಲ್ಡೊ ನಂತರ ಮ್ಯಾಡ್ರಿಡ್ ಪರ ಎರಡನೇ ಸಾರ್ವಕಾಲಿಕ ಗೋಲ್‌ಸ್ಕೋರರ್ ಎನಿಸಿಕೊಂಡಿದ್ದರು.
ಮ್ಯಾಡ್ರಿಡ್ ಪರ ಬೆಂಝೆಮಾ 5 ಚಾಂಪಿಯನ್ಸ್ ಲೀಗ್‌ಗಳು, 4 ಲಾ ಲಿಗಾ ಪ್ರಶಸ್ತಿಗಳು ಹಾಗೂ ಮೂರು ಕೊಪಾ ಡೆಲ್ ರೇ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. 2021-22ರ ಋತುವಿನಲ್ಲಿ ಅಮೋಘ ಪ್ರದರ್ಶನ ನೀಡಿ ಮ್ಯಾಡ್ರಿಡ್ ಚಾಂಪಿಯನ್ಸ್ ಲೀಗ್‌ನಲ್ಲಿ ಮಿಂಚಲು ಕಾರಣವಾಗಿದ್ದ ಬೆಂಝೆಮಾ ಪ್ರತಿಷ್ಠಿತ ಬ್ಯಾಲನ್ ಡಿಓರ್ ಪ್ರಶಸ್ತಿಗೆ ಭಾಜನರಾಗಿದ್ದರು. ಗಾಯದ ಸಮಸ್ಯೆಯ ಕಾರಣ ಕಳೆದ ವರ್ಷ ಖತರ್ ಆತಿಥ್ಯದಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ನಲ್ಲಿ ಫ್ರಾನ್ಸ್ ಪರ ಆಡುವುದರಿಂದ ವಂಚಿತರಾಗಿದ್ದರು.