ಮಾಜಿ ಸಚಿವ ಕೋಟೆ ಎಂ.ಶಿವಣ್ಣರ ಕಾರು ಕಳವು; ಪ್ರಕರಣ ದಾಖಲು

ಮೈಸೂರು,ಜೂ.7: ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಅವರ ಐಷಾರಾಮಿ ಕಾರನ್ನು ಮೂವರು ಮುಸುಕುದಾರಿಗಳು ಬಂದು ಕಳ್ಳತನ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ವಿಜಯನಗರ ಮೂರನೇ ಹಂತದಲ್ಲಿ ಈ ಘಟನೆ ನಡೆದಿದೆ. ಮುಖಕ್ಕೆ ಮಾಸ್ಕ್ ಹಾಕಿ, ರಾಜಾ ರೋಷವಾಗಿ ಮನೆಗೆ ನುಗ್ಗಿ ಮಾಜಿ ಸಚಿವ ಕೋಟೆ ಶಿವಣ್ಣ ಅವರಿಗೆ ಸೇರಿದ ಇನ್ನೋವಾ ಕಾರನ್ನು ಕದ್ದೊಯ್ದಿದ್ದಾರೆನ್ನಲಾಗಿದೆ.
ಜೂನ್ 6ರ ಮಧ್ಯರಾತ್ರಿ 1 ಗಂಟೆಯಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ಕಾಂಪೌಂಡ್ ಹಾರಿ ಬಂದು ಮನೆಯಲ್ಲಿ ಕೀ ಎಗರಿಸಿ ಕಾರು ಕದ್ದೊಯ್ದಿದ್ದಾರೆ. ಕೃತ್ಯ ಸಿಸಿ.ಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಮಾಜಿ ಮಂತ್ರಿಗೆ ಈ ರೀತಿ ಆದರೆ ಜನ ಸಾಮಾನ್ಯರ ಗತಿ ಏನು?'; ಮಾಜಿ ಸಚಿವ ಕೋಟೆ ಶಿವಣ್ಣ ಬೇಸರ:
'ತಮ್ಮ ಕಾರು ಕಳ್ಳತನವಾಗಿರುವ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೋಟೆ ಶಿವಣ್ಣ, ಕಾರು ಕದ್ದವನು ಮತ್ತೆ ಬಂದು ಫೈಲ್ ಬಿಟ್ಟು ಹೋಗಿದ್ದಾನೆ. 20 ವರ್ಷದಲ್ಲಿ ಇಂತಹ ಘಟನೆ ನನಗೆ ಆಗಿರಲಿಲ್ಲ. ಮಾಜಿ ಮಂತ್ರಿಗೆ ಈ ರೀತಿ ಆದರೆ ಜನ ಸಾಮಾನ್ಯರ ಗತಿ ಏನು..?'' ಎಂದು ಮಾಜಿ ಸಚಿವರು ಅಸಮಾಧಾನ ಹೊರ ಹಾಕಿದ್ದಾರೆ.