ಬಾಲಕಿಯ ಅತ್ಯಾಚಾರಗೈದು ಹತ್ಯೆ: ಪೊಲೀಸರಿಂದ ಆರೋಪಿ ಬಿಜೆಪಿ ನಾಯಕನ ರಕ್ಷಣೆ; ಕುಟುಂಬ ಆರೋಪ
ಬಸ್ತಿ: ಹದಿಮೂರು ವರ್ಷದ ಬಾಲಕಿಯನ್ನು ಮೂವರು ಸಾಮೂಹಿಕ ಅತ್ಯಾಚಾರಗೈದು ಹತ್ಯೆ ನಡೆಸಿದ ಘಟನೆ ಉತ್ತರಪ್ರದೇಶದ ಬಸ್ತಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಆರೋಪಿಗಳಲ್ಲಿ ಓರ್ವ ಬಿಜೆಪಿ ನಾಯಕನಾಗಿದ್ದು, ಆತನನ್ನು ಸ್ಥಳೀಯ ಪೊಲೀಸರು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೃತ ಬಾಲಕಿಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಬಾಲಕಿ ತರಕಾರಿ ತರಲು ಸೋಮವಾರ ಸ್ಥಳೀಯ ಮಾರುಕಟ್ಟೆಗೆ ತೆರಳಿದ ಸಂದರ್ಭ ಈ ಘಟನೆ ನಡೆದಿದೆ. ಬಾಲಕಿಯನ್ನು ಆರೋಪಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆಗೈದಿದ್ದಾರೆ. ಅನಂತರ ಆಕೆಯ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾರೆ. ಇವರಲ್ಲಿ ಓರ್ವ 14 ವರ್ಷದವನಾಗಿದ್ದು, ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. 23 ಹಾಗೂ 24 ವರ್ಷದ ಇನ್ನಿಬ್ಬರನ್ನು ಬಂಧಿಸಲಾಗಿದೆ ಹಾಗೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಕಿಯ ತಂದೆ, ‘‘ಪೊಲೀಸರು ಓರ್ವ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಯಾಕೆಂದರೆ, ಆತ ಸ್ಥಳೀಯ ಬಿಜೆಪಿಯ ನಾಯಕ. ಸ್ಥಳೀಯ ಪೊಲೀಸರು ಆಗಾಗ ಅವರೊಂದಿಗೆ ಇರುತ್ತಾರೆ. ಅವರಿಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ. ಆತ ನಮ್ಮ ಪ್ರದೇಶದ ಬಿಜೆಪಿಯ ಕಿಸಾನ್ ಮೋರ್ಚಾ ಘಟಕದ ಮಂಡಲ ಉಪಾಧ್ಯಕ್ಷ’’ ಎಂದು ಹೇಳಿದ್ದಾರೆ.
‘‘ಮರಣೋತ್ತರ ಪರೀಕ್ಷೆ ಅತ್ಯಾಚಾರವನ್ನು ದೃಢಪಡಿಸಿದೆ. ನನಗೆ ಮರಣೋತ್ತರ ಪರೀಕ್ಷೆಯ ಪ್ರತಿ ದೊರಕಿದೆ. ಅತ್ಯಾಚಾರದಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ವರದಿ ಹೇಳಿದೆ’’ ಎಂದು ಅವರು ತಿಳಿಸಿದ್ದಾರೆ. ‘‘ಘಟನೆಗೆ ಸಂಬಂಧಿಸಿ ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’’ ಎಂದು ಬಸ್ತಿ ಪೊಲೀಸ್ ಅಧೀಕ್ಷಕ ಗೋಪಾಲ್ ಕೃಷ್ಣ ಚೌಧುರಿ ಹೇಳಿದ್ದಾರೆ.