ಮಧ್ಯಪ್ರದೇಶದಲ್ಲಿ ಚುನಾವಣಾ ಪೂರ್ವ ಅಚ್ಚರಿ: ಬಲಪಂಥೀಯ ‘ಬಜರಂಗ ಸೇನಾ’ ಕಾಂಗ್ರೆಸ್ ಜೊತೆ ವಿಲೀನ

ಭೋಪಾಲ: ಮಧ್ಯಪ್ರದೇಶದಲ್ಲಿ ಕುತೂಹಲಕಾರಿ ಚುನಾವಣಾ ಪೂರ್ವ ಬೆಳವಣಿಗೆಯೊಂದರಲ್ಲಿ ಹಿಂದುತ್ವ ಮತ್ತು ಗೋಸಂರಕ್ಷಣೆಗಾಗಿ ಅರ್ಪಿಸಿಕೊಂಡಿರುವ ಬಲಪಂಥೀಯ ಸಂಘಟನೆ ಬಜರಂಗ ಸೇನಾ ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಂಡಿದೆ.
ಸಂಘಟನೆಯ ಸಂಚಾಲಕ ರಘುನಂದನ ಶರ್ಮಾ ಅವರು ಆರೆಸ್ಸೆಸ್ ಜೊತೆ ಸಂಪರ್ಕ ಹೊಂದಿದ್ದಾರೆ ಮತ್ತು ಬಿಜೆಪಿಯ ಸ್ಥಾಪಕ ಸದಸ್ಯರೂ ಆಗಿದ್ದಾರೆ. ಗೋ ಸಂರಕ್ಷಣೆ ಚಟುವಟಿಕೆಗಳಲ್ಲಿ ಮತ್ತು ಜಾತಿ ವ್ಯವಸ್ಥೆಯನ್ನು ವಿರೋಧಿಸುವ ಮೂಲಕ ಹಿಂದುಗಳನ್ನು ಒಂದುಗೂಡಿಸುವಲ್ಲಿ ತೊಡಗಿಕೊಂಡಿರುವ ಬಜರಂಗ ಸೇನಾ ಬಿಜೆಪಿಯನ್ನು ಬೆಂಬಲಿಸುತ್ತಿದೆ.
ಮಂಗಳವಾರ ಸಂಜೆ ಕಾಂಗ್ರೆಸ್ ನ ರಾಜ್ಯ ಕೇಂದ್ರಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜೊತೆ ಸಂಘಟನೆಯ ವಿಲೀನ ಸಂದರ್ಭದಲ್ಲಿ ಬಜರಂಗ ಸೇನಾದ ರಾಷ್ಟ್ರೀಯ ಅಧ್ಯಕ್ಷ ರಣವೀರ ಪಟೇರಿಯಾ ಅವರು,‘ಕಾಂಗ್ರೆಸಿನ ಸಿದ್ಧಾಂತ ಮತ್ತು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ ಅವರ ವಿಚಾರಗಳನ್ನು ನಾವು ಹೃತ್ಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ ’ ಎಂದು ಹೇಳಿದರು. ಈ ವೇಳೆ ಶರ್ಮಾ ಉಪಸ್ಥಿತರಿದ್ದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಮೋಸ,ವಿಶ್ವಾಸಘಾತ ಮತ್ತು ವಂಚನೆಗೆ ಇನ್ನೊಂದು ಹೆಸರಾಗಿರುವ ಬಿಜೆಪಿ ಸರಕಾರವನ್ನು ಪದಚ್ಯುತಗೊಳಿಸಲು ಮತ್ತು ಕಮಲನಾಥ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರವನ್ನು ತರಲು ತಾವು ಬದ್ಧರಾಗಿದ್ದೇವೆ ಎಂದೂ ಪಟೇರಿಯಾ ಹೇಳಿದರು.
ವಿಲೀನಕ್ಕೆ ಮುನ್ನ ನಡೆದ ‘ಭಗವಾ ರ್ಯಾಲಿ’ಯಲ್ಲಿ ಕೇಸರಿ ಶಾಲುಗಳನ್ನು ಧರಿಸಿದ್ದ ಮತ್ತು ಕೇಸರಿ ಧ್ವಜಗಳನ್ನು ಹಿಡಿದುಕೊಂಡಿದ್ದ ನೂರಾರು ಯುವಜನರು ಭಾಗವಹಿಸಿದ್ದರು.
ಬಲಪಂಥೀಯ ಸಂಘಟನೆಯ ವಿಲೀನದೊಂದಿಗೆ ಸಿದ್ಧಾಂತಗಳ ಸಂಘರ್ಷ ಉಂಟಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ನ ಮಾಧ್ಯಮ ವಿಭಾಗದ ಮುಖ್ಯಸ್ಥ ಕೆ.ಕೆ.ಮಿಶ್ರಾ, ಅವರೆಲ್ಲ ಈಗ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ, ಹೀಗಾಗಿ ಯಾವುದೇ ಸಂಘರ್ಷವಿರುವುದಿಲ್ಲ ಎಂದು ಹೇಳಿದರು.