ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಭಾರತ ವಿರುದ್ಧ ಬೃಹತ್ ಮೊತ್ತದತ್ತ ಆಸ್ಟ್ರೇಲಿಯ
ಟ್ರಾವಿಸ್ ಹೆಡ್ ಶತಕ, ಸ್ಟೀವ್ ಸ್ಮಿತ್ ಅರ್ಧಶತಕ
ದಿ ಓವಲ್,ಜೂ.7: ಮಧ್ಯಮ ಕ್ರಮಾಂಕದ ಬ್ಯಾಟರ್ ಟ್ರಾವಿಸ್ ಹೆಡ್ ಶತಕ (ಔಟಾಗದೆ 146 ರನ್,156 ಎಸೆತ, 22 ಬೌಂಡರಿ, 1 ಸಿಕ್ಸರ್) ಹಾಗೂ ಸ್ಟೀವನ್ ಸ್ಮಿತ್(ಔಟಾಗದೆ 95, 227 ಎಸೆತ, 14 ಬೌಂಡರಿ) ಅರ್ಧಶತಕದ ಕೊಡುಗೆಯ ನೆರವಿನಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಮೊದಲ ದಿನದಾಟದಲ್ಲಿ ಭಾರತ ವಿರುದ್ಧ ಉತ್ತಮ ಮೊತ್ತ ಕಲೆ ಹಾಕುವತ್ತ ದಾಪುಗಾಲಿಟ್ಟಿದೆ.
ಬುಧವಾರ ಟಾಸ್ ಸೋತ ಆಸ್ಟ್ರೇಲಿಯವು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪ್ಪಟಿತು. 85 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿತು.
4ನೇ ಓವರ್‌ನಲ್ಲಿ ಔಟಾದ ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ(0)ಖಾತೆ ತೆರೆಯುವಲ್ಲಿ ವಿಫಲರಾದರು. ಸಿರಾಜ್ ಅವರು ಖ್ವಾಜಾ ವಿಕೆಟ್ ಪಡೆಯಲು ಸಫಲರಾದರು. ಆಗ 2ನೇ ವಿಕೆಟ್‌ಗೆ 69 ರನ್ ಜೊತೆಯಾಟ ನಡೆಸಿದ ಡೇವಿಡ್ ವಾರ್ನರ್(43 ರನ್, 60 ಎಸೆತ)ಹಾಗೂ ಮಾರ್ನಸ್ ಲ್ಯಾಬುಶೇನ್(26 ರನ್, 62 ಎಸೆತ)ತಂಡವನ್ನು ಆಧರಿಸಿದರು.
ವಾರ್ನರ್ ಹಾಗೂ ಲ್ಯಾಬುಶೇನ್ ಬೆನ್ನುಬೆನ್ನಿಗೆ ಔಟಾದರು. ಆಗ ಜೊತೆಯಾದ ಹೆಡ್ ಹಾಗೂ ಸ್ಮಿತ್ ಪಂದ್ಯದ ಚಿತ್ರಣವನ್ನು ಬದಲಿಸಿದರು. ಈ ಜೋಡಿ 4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 251 ರನ್ ಸೇರಿಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿತು.
ಸ್ಮಿತ್ 144 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 38ನೇ ಅರ್ಧಶತಕ ಪೂರೈಸಿದರು. ಹೆಡ್ ಕೇವಲ 106 ಎಸೆತಗಳಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 6ನೇ ಟೆಸ್ಟ್ ಶತಕ ಪೂರೈಸಿದರು. ಹೆಡ್ ಅವರು ಭಾರತ ವಿರುದ್ಧ ಮೊದಲ ಬಾರಿ ಪ್ರಮುಖ ಪಂದ್ಯದಲ್ಲಿ ಮೂರಂಕೆ ದಾಖಲಿಸಿ ಗಮನ ಸೆಳೆದರು.
ಭಾರತದ ಬೌಲಿಂಗ್‌ನಲ್ಲಿ ಮುಹಮ್ಮದ್ ಸಿರಾಜ್(1-67), ಮುಹಮ್ಮದ್ ಶಮಿ(1-77) ಹಾಗೂ ಶಾರ್ದೂಲ್ ಠಾಕೂರ್(1-75) ತಲಾ ಒಂದು ವಿಕೆಟ್ ಪಡೆದರು.