ಕೆನಡದಿಂದ 700ಕ್ಕೂ ಅಧಿಕ ವಿದ್ಯಾರ್ಥಿಗಳ ಗಡಿಪಾರು ಸಾಧ್ಯತೆ: ವಿದೇಶಾಂಗ ಸಚಿವರ ಮಧ್ಯ ಪ್ರವೇಶಕ್ಕೆ ಪಂಜಾಬ್ ಮನವಿ
ಹೊಸದಿಲ್ಲಿ: ಕೆನಡದಿಂದ 700ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳ ಗಡಿಪಾರುಗೊಳಿಸುವ ಸಾಧ್ಯತೆಯಿದ್ದು, ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕೆಂದು ಪಂಜಾಬ್ ಸರಕಾರವು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಬುಧವಾರ ಮನವಿ ಮಾಡಿದೆ.
ಕೆನಡದ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ದಾಖಲಾತಿಯ ಕುರಿತಾದ ಪತ್ರಗಳು ನಕಲಿಯೆಂದು ಪತ್ತೆಯಾದ ಬಳಿಕ ಈ ವಿದ್ಯಾರ್ಥಿಗಳು ಗಡಿಪಾರು ಭೀತಿಯನ್ನು ಎದುರಿಸುತ್ತಿದ್ದಾರೆ.
ಈ ವಿದ್ಯಾರ್ಥಿಗಳು 2018-19ರಲ್ಲಿ ಅಧ್ಯಯನ ವೀಸಾದ ನೆಲೆಯಲ್ಲಿ ಕೆನಡಕ್ಕೆ ತೆರಳಿದ್ದರು. ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ಬಳಿಕ ಅವರು ಆ ದೇಶದಲ್ಲಿ ಕೆಲಸ ಮಾಡಲು ಪರವಾನಿಗೆಗಳನ್ನು ಪಡೆದಿದ್ದರು. ಆದರೆ ಕೆನಡದಲ್ಲಿ ಖಾಯಂ ವಾಸ್ತವ್ಯಕ್ಕಾಗಿ ಅರ್ಜಿ ಸಲ್ಲಿಸಿದ ಸಂದರ್ಭ ಈ ವಿದ್ಯಾರ್ಥಿಗಳ ಶಿಕ್ಷಣಸಂಸ್ಥೆ ದಾಖಲಾತಿ ಪತ್ರಗಳು ನಕಲಿಯೆಂಬುದು ಬೆಳಕಿಗೆ ಬಂದಿತ್ತು.
ಬ್ರಿಜೇಶ್ ಮಿಶ್ರಾ ಎಂಬಾತ ನಡೆಸುತ್ತಿದ್ದ ಜಲಂಧರ್ನ ಶಿಕ್ಷಣ ವಲಸೆ ಸೇವಾ ಸಂಸ್ಥೆಯ ಮೂಲಕ ಈ ವಿದ್ಯಾರ್ಥಿಗಳು ಕೆನಡದಲ್ಲಿ ಅಧ್ಯಯನ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ಈ ವಿದ್ಯಾರ್ಥಿಗಳು ವಂಚಕರಿಂದ ಮೋಸಕ್ಕೊಳಗಾಗಿದ್ದಾರೆಂದು ಪಂಜಾಬ್ನ ಅನಿವಾಸಿ ಭಾರತೀಯ ವ್ಯವಹಾರಗಳ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಅವರು ಕೇಂದ್ರ ಸಚಿವ ಎಸ್.ಜೈಶಂಕರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಈ ವಿದ್ಯಾರ್ಥಿಗಳ ವಿಷಯವನ್ನು ವೈಯಕ್ತಿಕವಾಗಿ ಗಣನೆಗೆ ತೆಗೆದುಕೊಂಡು ಕೆನಡದ ರಾಯಭಾರಿ ಕಚೇರಿ ಹಾಗೂ ಕೆನಡ ಸರಕಾರ ಸೇರಿದಂತೆ ಸಂಬಂಧ ಪಟ್ಟ ಸಂಸ್ಥೆಗಳ ಮುಂದೆ ಪ್ರಸ್ತಾವಿಸಬೇಕು. ಆ ಮೂಲಕ ಈ ವಿದ್ಯಾರ್ಥಿಗಳು ಗಡಿಪಾರಿಗೊಳ್ಳುವುದನ್ನು ತಪ್ಪಿಸಬೇಕು ’’ ಎಂದು ಧಲಿವಾಲ್ ಪತ್ರದಲ್ಲಿ ಕೋರಿದ್ದಾರೆ.
ವಿದೇಶಕ್ಕೆ ತೆರಳುವ ಮುನ್ನ ಜನರು ತಮ್ಮ ಕಾಲೇಜಿನ ವಿವರಗಳು ಹಾಗೂ ಟ್ರಾವೆಲ್ ಏಜೆಂಟರ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕೆಂದು ಧಲಿವಾಲ್ ಮನವಿ ಮಾಡಿದ್ದಾರೆ.