ಫ್ರೆಂಚ್ ಓಪನ್: ಅಲ್ಕರಾಝ್ ಸೆಮಿಫೈನಲ್ ಗೆ, ನೊವಾಕ್ ಜೊಕೊವಿಕ್ ಎದುರಾಳಿ
ಪ್ಯಾರಿಸ್: ವಿಶ್ವದ ನಂ.1 ಆಟಗಾರ ಕಾರ್ಲೊಸ್ ಅಲ್ಕರಾಝ್ ಮೂರನೇ ಸೆಟ್ ನಲ್ಲಿ ಹಿನ್ನಡೆ ಅನುಭವಿಸಿದ ಹೊರತಾಗಿಯೂ ಗ್ರೀಸ್ ನ ಸ್ಟೆಫನೊಸ್ ಸಿಟ್ಸಿಪಾಸ್ ಗೆ ಸೋಲುಣಿಸಿ ಫ್ರೆಂಚ್ ಓಪನ್ ನಲ್ಲಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಅಂತಿಮ-4ರ ಘಟ್ಟದಲ್ಲಿ ಸರ್ಬಿಯದ ಸ್ಟಾರ್ ಆಟಗಾರ ನೊವಾಕ್ ಜೊಕೊವಿಕ್ ಸವಾಲನ್ನು ಎದುರಿಸಲಿದ್ದಾರೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ಅಲ್ಕರಾಝ್ ಐದನೇ ಶ್ರೇಯಾಂಕದ ಸಿಟ್ಸಿಪಾಸ್ರನ್ನು 6-2, 6-1, 7-6(5)ಸೆಟ್ ಗಳ ಅಂತರ ದಿಂದ ಮಣಿಸಿದರು.
20ರ ಹರೆಯದ ಅಲ್ಕರಾಝ್ ಶುಕ್ರವಾರ ನಡೆಯಲಿರುವ ಕತ್ತುಕತ್ತಿನ ಸೆಮಿ ಫೈನಲ್ ನಲ್ಲಿ 3ನೇ ಶ್ರೇಯಾಂಕದ ಜೊಕೊವಿಕ್ರನ್ನು ಮುಖಾಮುಖಿಯಾಗಲಿದ್ದಾರೆ. ಕಳೆದ ವರ್ಷ ಅಮೆರಿಕನ್ ಓಪನ್
ಪ್ರಶಸ್ತಿ ಜಯಿಸಿರುವ ಸ್ಪೇನ್ ಆಟಗಾರ ಅಲ್ಕರಾಝ್ ಎರಡನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯ ಬೇಟೆಯ ಲ್ಲಿದ್ದಾರೆ. ಹಿರಿಯ ಆಟಗಾರ ಜೊಕೊವಿಕ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ದಾಖಲೆಯ 23ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವತ್ತ ಚಿತ್ತಹರಿಸಿದ್ದಾರೆ.
ಜೊಕೊವಿಕ್ ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ಮೊದಲ ಸೆಟನ್ನು ಸೋತಿದ್ದರೂ ಕೂಡ ರಶ್ಯದ ಕರೆನ್ ಖಚನೋವ್ರನ್ನು 4-6, 7-6(0), 6-2, 6-4 ಸೆಟ್ಗಳ ಅಂತರ
ದಿಂದ ಮಣಿಸಿ ಫ್ರೆಂಚ್ ಓಪನ್ ನಲ್ಲಿ ಸೆಮಿ ಫೈನಲ್ ಗೆ ತಲುಪಿದ್ದಾರೆ. ಈ ಗೆಲುವಿನ ಮೂಲಕ ಜೊಕೊವಿಕ್ ಸತತ ಮೂರನೇ ಗ್ರ್ಯಾನ್ ಸ್ಲಾಮ್ ನಲ್ಲಿ ಸೆಮಿ ಫೈನಲ್ ತಲುಪುವ ಖಚನೋವ್ ಕನಸನ್ನು
ಭಗ್ನಗೊಳಿಸಿದರು. ಒಂದು ವೇಳೆ ಜೊಕೊವಿಕ್ ಪ್ಯಾರಿಸ್ ನಲ್ಲಿ ಪ್ರಶಸ್ತಿ ಜಯಿಸಿದರೆ ನಂ.1 ಸ್ಥಾನಕ್ಕೆ ವಾಪಸಾಗಲಿದ್ದಾರೆ.