ಮಣಿಪುರ: ಒಂದು ಸಮುದಾಯಕ್ಕೆ ಪ್ರತ್ಯೇಕ ಆಡಳಿತ ಕೋರಿದ್ದ 10 ಶಾಸಕರಿಗೆ ಶೋಕಾಸ್ ನೋಟಿಸ್

ಹೊಸದಿಲ್ಲಿ: ಮಣಿಪುರದಲ್ಲಿ ನಡೆದ ಹಿಂಸಾಚಾರಗಳ ನಂತರ ಒಂದು ಸಮುದಾಯಕ್ಕೆ ಪ್ರತ್ಯೇಕ ಆಡಳಿತವನ್ನು ಕೋರಿದ್ದ ಕುಕಿ-ಝೋಮಿ ಸಮುದಾಯದ 10 ಮಂದಿ ಶಾಸಕರಿಗೆ ರಾಜ್ಯ ವಿಧಾನಸಭೆಯ ಸವಲತ್ತುಗಳ ಮತ್ತು ನೀತಿ ಸಮಿತಿಯು ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಈ ಬೇಡಿಕೆಯನ್ನು ಏಕೆ ಮುಂದಿಟ್ಟಿದ್ದೀರಿ ಎಂಬುದಕ್ಕೆ ಉತ್ತರ ಕೋರಿ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದ್ದು ಜೂನ್ 16ರೊಳಗೆ ಉತ್ತರಿಸುವಂತೆ ಅವರಿಗೆ ಸೂಚಿಸಲಾಗಿದೆ.
ಈ 10 ಮಂದಿ ಶಾಸರಕರಲ್ಲಿ ಆಡಳಿತ ಬಿಜೆಪಿಯ ಶಾಸಕರು ಹಾಗೂ ಬಿರೇನ್ ಸಿಂಗ್ ಸರ್ಕಾರದ ಇಬ್ಬರು ಸಚಿವರೂ ಸೇರಿದ್ದಾರೆ.
ಭಾರತೀಯ ಸಂವಿಧಾನದಡಿ ಪ್ರತ್ಯೇಕ ಆಡಳಿತವನ್ನು ರಚಿಸಿ ತಮ್ಮ ಸಮುದಾಯದ ಜನರು ಶಾಂತಿಯುತವಾಗಿ ಮಣಿಪುರ ರಾಜ್ಯದೊಂದಿಗೆ ನೆರೆಹೊರೆಯವರಾಗಿ ಬಾಳಲು ಅವಕಾಶ ಕಲ್ಪಿಸಬೇಕೆಂದು ಈ ಶಾಸಕರು ಕೇಂದ್ರ ಸರ್ಕಾರವನ್ನು ಕೋರಿದ್ದರು. ತಮ್ಮ ಬೇಡಿಕೆ ಮುಂದಿಟ್ಟುಕೊಂಡು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿಯಾಗಿ ಮನವಿ ಸಲ್ಲಿಸಿದ್ದರು.
ಸಹಿ ಹಾಕಿದವರಲ್ಲಿ ಹಾಕ್ಹೋಲೆಟ್ ಕಿಪ್ಜೆನ್ (ಸ್ವತಂತ್ರ ಶಾಸಕ, ಸೈಟು ); ಕಿಮ್ನಿಯೋ ಹಾಕಿಪ್ ಹ್ಯಾಂಗ್‌ಶಿಂಗ್ (ಕೆಪಿಎ ಶಾಸಕ, ಸಾಯಿಕುಲ್); ಎಲ್ ಎಂ ಖೌಟೆ (ಬಿಜೆಪಿ ಶಾಸಕ, ಚುರಚಂದಪುರ); ಚಿನ್ಲುಂಗ್ಥಾಂಗ್ (ಕೆಪಿಎ ಶಾಸಕ, ಸಿಂಗ್ಗಾಟ್); ನೆಮ್ಚಾ ಕಿಪ್ಗೆನ್ (ಬಿಜೆಪಿ ಶಾಸಕ, ಕಾಂಗ್ಪೊಕ್ಪಿ); ನ್ಗುರ್ಸಂಗ್ಲೂರ್ ಸನತೆ (ಬಿಜೆಪಿ ಶಾಸಕ, ತಿಪೈಮುಖ); ಲೆಟ್ಪಾವೊ ಹಾಕಿಪ್ (ಬಿಜೆಪಿ ಶಾಸಕ, ತೆಂಗ್ನೌಪಾಲ್); ಲೆಟ್ಜಮಾಂಗ್ ಹಾಕಿಪ್ (ಬಿಜೆಪಿ ಶಾಸಕ, ಹೆಂಗ್ಲೆಪ್); ಪಾವೊಲಿಯನ್‌ಲಾಲ್ ಹಾಕಿಪ್ (ಬಿಜೆಪಿ ಶಾಸಕ, ಸೈಕೋಟ್) ಮತ್ತು ವುಂಗ್‌ಜಗಿನ್ ವಾಲ್ಟೆ (ಬಿಜೆಪಿ ಶಾಸಕ, ಥಾಂಟನ್) ಸೇರಿದ್ದಾರೆ.
ಇವರ ಪೈಕಿ ಥಾಂಟನ್ ಶಾಸಕ ಮೇ 3ರಂದು ನಡೆದ ಹಿಂಸಾಚಾರದಲ್ಲಿ ಗಾಯಗೊಂಡಿದ್ದರು.