ಕೇರಳ: ಆರು ವರ್ಷದ ಪುತ್ರಿಯ ಕೊಚ್ಚಿ ಕೊಂದ ತಂದೆ
ಅಲಪ್ಪುಝ: ತನ್ನ ಆರು ವರ್ಷದ ಪುತ್ರಿ ನಕ್ಷತ್ರ ಎಂಬಾಕೆಯನ್ನು ತಂದೆಯೊಬ್ಬ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಾವೆಲಿಕ್ಕಾರದ ಬಳಿಯ ಪುನ್ನಮೂಡು ಬಳಿ ಬುಧವಾರ ನಡೆದಿದೆ. ಆರೋಪಿ ಮಹೇಶ್ (38) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು onmanorama.com ವರದಿ ಮಾಡಿದೆ.
ವರದಿಗಳ ಪ್ರಕಾರ, ಈ ಘಟನೆಯು ರಾತ್ರಿ 7.30ರ ಸಮಯದಲ್ಲಿ ಸಂಭವಿಸಿದ್ದು, ಮಹೇಶನ ಮನೆಯಿಂದ ದೊಡ್ಡ ಚೀರಾಟ ಕೇಳಿ ಆತನ ನೆರೆಮನೆಯಲ್ಲಿ ತನ್ನ ಪುತ್ರಿಯೊಂದಿಗೆ ವಾಸವಿದ್ದ ಮಹೇಶನ ತಾಯಿ ಸುನಂದ (62) ಅಲ್ಲಿಗೆ ಧಾವಿಸಿದಾಗ ಆತನ ಪುತ್ರಿಯು ದಾಳಿಯ ನಂತರ ಗಂಭೀರ ಗಾಯಗಳೊಂದಿಗೆ ಸೋಫಾ ಮೇಲೆ ಬಿದ್ದಿರುವುದು ಕಂಡು ಬಂದಿದೆ.
ಕೂಡಲೇ ಮನೆಯಿಂದ ಹೊರಗೋಡಿ ಬಂದಿರುವ ಸುನಂದ, ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಹೀಗೆ ಕೂಗಿಕೊಂಡ ತಾಯಿಯನ್ನು ಅಟ್ಟಾಡಿಸಿ, ಆಕೆಯ ಮೇಲೂ ದಾಳಿ ನಡೆಸಿದ್ದಾನೆ ಮಹೇಶ್. ಈ ದಾಳಿಯಲ್ಲಿ ಆಕೆಯ ಕೈಗೆ ಗಾಯವಾಗಿದ್ದು, ಆಕೆಯನ್ನು ಮಾವೆಲಿಕ್ಕಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಕೂಗಾಟ ಕೇಳಿ ತನ್ನ ಮನೆಯಿಂದ ಮುಂದೆ ನೆರೆದ ನೆರೆಹೊರೆಯವರಿಗೂ ಕೊಡಲಿ ತೋರಿಸಿ ಬೆದರಿಸಿರುವ ಮಹೇಶ್, ಅವರ ಮೇಲೆ ಹಲ್ಲೆಗೂ ಯತ್ನಿಸಿದ್ದಾನೆ.
ನಕ್ಷತ್ರಳ ತಾಯಿ ವಿದ್ಯಾ ಮೂರು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ತಂದೆ ಮುಕುಂದನ್ ರೈಲು ಅಪಘಾತದಲ್ಲಿ ಮೃತಪಟ್ಟ ನಂತರ ಮಹೇಶ್ ವಿದೇಶದಿಂದ ಕೇರಳಕ್ಕೆ ವಾಪಸ್ಸಾಗಿದ್ದ.
ನೆರೆಯವರ ಪ್ರಕಾರ, ಮಹೇಶ್ ಮರುವಿವಾಹವಾಗಲು ಬಯಸಿದ್ದ. ಆದರೆ, ಮಹೇಶ್‌ನ ವ್ಯಕ್ತಿತ್ವ ದೋಷವನ್ನರಿತ ವಧುವಿನ ಪೋಷಕರು ವಿವಾಹ ಸಂಬಂಧದಿಂದ ಹಿಂದೆ ಸರಿದಿದ್ದರು ಎಂದು ಹೇಳಲಾಗಿದೆ.