ದಿಲ್ಲಿಯಿಂದ ಕೆಲವು ಮಾರ್ಗಗಳಲ್ಲಿ ವಿಮಾನ ದರ ಶೇ.61ರಷ್ಟು ಇಳಿಕೆ: ಸಚಿವ ಜ್ಯೋತಿರಾದಿತ್ಯ ಸಿಂಧಿಯಾ

ಹೊಸದಿಲ್ಲಿ: ಜೂನ್ 6 ರಂದು ನಡೆದ ವಿಮಾನಯಾನ ಸಂಸ್ಥೆಗಳ ಸಲಹಾ ಗುಂಪಿನ ಸಭೆಯ ನಂತರ ದಿಲ್ಲಿಯಿಂದ ಕೆಲವು ಮಾರ್ಗಗಳಲ್ಲಿ ವಿಮಾನ ದರವನ್ನು ಗಣನೀಯವಾಗಿ ಶೇ.14 ರಿಂದ 61ರಷ್ಟು ಕಡಿಮೆ ಮಾಡಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಹಾಗೂ ಸಚಿವಾಲಯದ ಮೇಲ್ವಿಚಾರಣಾ ಪ್ರಯತ್ನಗಳನ್ನು ಒತ್ತಿ ಹೇಳಿದ ಸಿಂಧಿಯಾ , ದಿಲ್ಲಿಯಿಂದ ಶ್ರೀನಗರ, ಲೇಹ್, ಪುಣೆ ಹಾಗೂ ಮುಂಬೈಯಂತಹ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಗರಿಷ್ಠ ದರಗಳಲ್ಲಿ ಕಡಿತ ಆಗಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
"ದಿಲ್ಲಿಯಿಂದ ಶ್ರೀನಗರ, ಲೇಹ್, ಪುಣೆ ಮತ್ತು ಮುಂಬೈಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಗರಿಷ್ಠ ದರವನ್ನು ಜೂನ್ 6 ರಂದು ಶೇಕಡಾ 14-61 ರಷ್ಟು ಕಡಿಮೆ ಮಾಡಲಾಗಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಹಾಗೂ ಸಚಿವಾಲಯವು ದೈನಂದಿನ ದರಗಳನ್ನು ಮೇಲ್ವಿಚಾರಣೆ ನಡೆಸುತ್ತಿವೆ'' ಎಂದು ಸಿಂಧಿಯಾ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಅಡಿಯಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ವಿಮಾನಯಾನ ಕ್ಷೇತ್ರವು ಮಾಡಿದ ಕಾರ್ಯಗಳನ್ನು ಬಿಂಬಿಸುವ ಉದ್ದೇಶದಿಂದ ಕೇಂದ್ರ ಸಚಿವರು ರಾಷ್ಟ್ರ ರಾಜಧಾನಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.