ಕೊರಗ ಯುವಕರ ಮೇಲಿನ ಸುಳ್ಳು ದರೋಡೆ ಪ್ರಕರಣ: ಜೂ.10ರಂದು ಪಡುಬಿದ್ರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ
►ಕೊರಗ ಸಮುದಾಯದ ಉಳಿವಿಗೆ ಗ್ಯಾರಂಟಿ ಕೊಡಿ... ►ಪಡುಬಿದ್ರಿ ಕೊರಗರಿಗೆ ನ್ಯಾಯ ಕೊಡಿ...

ಉಡುಪಿ, ಜೂ.8: ಇನ್ನಾ ಪರಿಸರದ ಕೊರಗ ಯುವಕರ ಮೇಲೆ ಸುಳ್ಳು ದರೋಡೆ ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವತಿಯಿಂದ ಜೂ.10ರ ಶನಿವಾರ ಪಡುಬಿದ್ರಿ ಪೊಲೀಸ್ ಠಾಣೆಯ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ.
ಪಡುಬಿದ್ರೆ ಪೊಲೀಸ್ ಠಾಣೆ ವ್ಯಾಪ್ತಿಯ ಇನ್ನಾ ಮೈಕ್ರೋವೇವ್ ಸ್ಟೇಷನ್ ಪರಿಸರದ ಕೊರಗ ಸಮುದಾಯದ ಯುವಕರ ಮೇಲೆ ಸ್ಥಳೀಯ ವ್ಯಕ್ತಿಯೋರ್ವ ಕಟ್ಟಿ ಹಾಕಿ ದರೋಡೆ ನಡೆಸಿದ್ದಾರೆ ಎಂಬ ಸುಳ್ಳು ಪ್ರಕರಣವನ್ನು ದಾಖಲಿಸಿ, ಸುಮಾರು 35 ದಿನಗಳ ಕಾಲ ಅವರ ನ್ಯಾಯಾಂಗ ಬಂಧನಕ್ಕೆ ಕಾರಣವಾದ ಘಟನೆಯನ್ನು ವಿರೋಧಿಸಿ ಮತ್ತು ಇಡೀ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಜೂ.10ರಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಮಿತಿಗಳ ವತಿಯಿಂದ ಪಡುಬಿದ್ರಿಯಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ಬಹಿರಂಗ ಸಭೆ ನಡೆಸುವ ಮೂಲಕ ನ್ಯಾಯಕ್ಕಾಗಿ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಸಮಿತಿ ತಿಳಿಸಿದೆ.
ವಾಸ್ತವವಾಗಿ ಕೊರಗ ಯುವಕರ ಮೇಲೆ ದರೋಡೆ ಪ್ರಕರಣ ದಾಖಲು ಮಾಡಿರುವ ದೂರುದಾರ ವ್ಯಕ್ತಿ ಕೊರಗ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವ ಆರೋಪಿಯಾಗಿದ್ದು, ಆ ವ್ಯಕ್ತಿಯನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಬೇಕಾದ ಪಡುಬಿದ್ರಿ ಪೊಲೀಸರು ಆರೋಪಿಯೊಂದಿಗೆ ಶಾಮೀಲಾಗಿ ದರೋಡೆ ನಡೆಸಿದರು ಎನ್ನುವ ಕಟ್ಟುಕತೆ ಕಟ್ಟಿ ನಿರಪರಾಧಿ ಬಡ ಕೊರಗ ಸಮುದಾಯದ ಯುವಕರ ಭವಿಷ್ಯದೊಂದಿಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಸಮಿತಿ ಆರೋಪಿಸಿದೆ.
ದರೋಡೆ ಪ್ರಕರಣದ ದೂರುದಾರನಾದ ನಿವೃತ್ತ ಬಿಎಸ್‌ಎನ್‌ಎಲ್ ಉದ್ಯೋಗಿಯೇ ನಿರಂತರವಾಗಿ ಮಹಿಳೆಯರ ಮೇಲೆ ನಡೆಸುತಿದ್ದ ವಿಕೃತ ಸ್ವರೂಪದ ಕೃತ್ಯಕ್ಕೆ ಬೆಂಬಲ ನೀಡಿ ಸಂತ್ರಸ್ತ ಕೊರಗ ಮಹಿಳೆಯ ದೂರನ್ನು ಸ್ವೀಕರಿಸಲು ನಿರಾಕರಿಸಿ ಮಹಿಳಾ ದೂರುದಾರರನ್ನು ಇತರೆ ಪುರುಷರ ಎದುರಿಗೆ ಅಪಮಾನವಾಗುವಂತೆ ಪೊಲೀಸರು ನಡೆದುಕೊಂಡಿದ್ದಾರೆ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆರೋಪಿಸಿದೆ.
ಗೌಪ್ಯತೆ ಮೂಲಕ ವಿಚಾರಿಸಬೇಕಾದ ನಿಯಮಕ್ಕೆ ವ್ಯತಿರಿಕ್ತವಾಗಿ ವರ್ತಿಸಿದ್ದಲ್ಲದೇ, ಈ ಬಗ್ಗೆ ಕೊರಗ ಸಮುದಾಯ ದವರು ನೀಡಿರುವ ದೂರನ್ನು ಹಿಂದಕ್ಕೆ ಪಡೆಯಲು ಪರೋಕ್ಷವಾಗಿ ಒತ್ತಡ ಹೇರಿದ್ದಾರೆ ಎಂದೂ ಸಮಿತಿ ದೂರಿದೆ.
ಕರಾವಳಿ ಕರ್ನಾಟಕದ ಮೂಲನಿವಾಸಿಗಳಾದ ಮತ್ತು ಅಳಿವಿನಂಚಿನಲಿರುವ ಕೊರಗ ಸಮುದಾಯಕ್ಕೆ ಎಲ್ಲಾ ಹಂತಗಳಲ್ಲೂ ಅನ್ಯಾಯವಾಗಿದೆ. ಆದ್ದರಿಂದ ಇಡೀ ಪ್ರಕರಣವನ್ನು ಸರಕಾರ ಮರು ತನಿಖೆ ನಡೆಸಬೇಕು. ಗಂಭೀರ ಪ್ರಮಾಣದ ಕರ್ತವ್ಯಲೋಪ ಎಸಗಿರುವ ಪೊಲೀಸರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಡೀ ಪ್ರಕರಣದಲ್ಲಿ ಬಾಧಿತರಾದ ಕೊರಗ ಸಮುದಾಯದ ಯುವಕರಿಗೆ, ಮಹಿಳೆಗೆ ಪರಿಹಾರವನ್ನು ನೀಡಿ, ಅವರಿಗೆ ಜೀವ ಮತ್ತು ಜೀವನ ಭದ್ರತೆ ಕಲ್ಪಿಸಿಕೊಡಬೇಕು ಎಂದು ಸಮಿತಿ ಒತ್ತಾಯಿಸಿದೆ.
ಜೂನ್ 10ರಂದು ನಡೆಯುವ ಹೋರಾಟ ಸರಕಾರವನ್ನು ಎಚ್ಚರಿಸುವ ಹೋರಾಟವಾಗಿದೆ. ಪೊಲೀಸ್ ಇಲಾಖೆ ಕೊರಗ ಸಮುದಾಯದ ರಕ್ಷಣೆಗೆ ನಿಲ್ಲುವ ಬದಲು ದಮನಿಸುವ ಕೆಲಸ ಮಾಡಿರುವುದನ್ನು ಇಡೀ ರಾಜ್ಯದ ಗಮನ ಸೆಳೆಯಲು ಹೋರಾಟ ಮಾಡುತಿದ್ದೇವೆ.
‘ಕೊರಗ ಸಮುದಾಯದ ಉಳಿವಿಗಾಗಿ ಗ್ಯಾರಂಟಿ ಕೊಡಿ’ ಎಂಬ ಘೋಷಣೆಯೊಂದಿಗೆ ಈ ಹೋರಾಟ ಮಾಡಲಿ ದ್ದೇವೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.