ತಾಂತ್ರಿಕ ದೋಷ: ದಿಲ್ಲಿ-ಸ್ಯಾನ್ ಫ್ರಾನ್ಸಿಸ್ಕೋ ವಿಮಾನದ ಎಲ್ಲಾ ಪ್ರಯಾಣಿಕರ ಹಣ ವಾಪಸ್ ನೀಡಲಿರುವ ಏರ್ ಇಂಡಿಯಾ

ಮುಂಬೈ: ಜೂನ್ 6ರಂದು ತಾಂತ್ರಿಕ ಸಮಸ್ಯೆಯ ಕಾರಣ ರಷ್ಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ ದಿಲ್ಲಿ-ಸ್ಯಾನ್‌ಫ್ರಾನ್ಸಿಸ್ಕೋ ವಿಮಾನದ ಎಲ್ಲಾ ಪ್ರಯಾಣಿಕರ ಪೂರ್ಣ ಟಿಕೆಟ್ ಶುಲ್ಕವನ್ನು ಏರ್ ಇಂಡಿಯಾ ವಾಪಸ್ ನೀಡಲಿದೆ.
ಕೊನೆಗೂ ದಿಲ್ಲಿಯಿಂದ ನಿರ್ಗಮಿಸಿದ ಸುಮಾರು 56 ಗಂಟೆಗಳ ನಂತರ ಪ್ರಯಾಣಿಕರು ತಮ್ಮ ಗಮ್ಯಸ್ಥಾನ ತಲುಪಿದ್ದಾರೆ. ಪೂರ್ಣ ಟಿಕೆಟ್ ಹಣ ವಾಪಸಾತಿ ಹೊರತಾಗಿ ಭವಿಷ್ಯದಲ್ಲಿ ಏರ್ ಇಂಡಿಯಾ ಪ್ರಯಾಣಕ್ಕೆ ವೋಚರ್‌ಗಳನ್ನು ಒದಗಿಸಲಾಗುವುದು ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 216 ಪ್ರಯಾಣಿಕರು ಹಾಗೂ 16 ಸಿಬ್ಬಂದಿಗಳಿದ್ದ ವಿಮಾನವು ಇಂಜಿನ್ ದೋಷದಿಂದಾಗಿ ರಷ್ಯಾದ ಮಗದನ್ ಬಂದರು ನಗರದಲ್ಲಿ ಇಳಿದಿತ್ತು. ಬುಧವಾರ ಏರ್ ಇಂಡಿಯಾ ಅಲ್ಲಿಗೆ ಬೇರೆ ವಿಮಾನ ಕಳುಹಿಸಿ ಅಲ್ಲಿಂದ ಪ್ರಯಾಣಿಕರನ್ನು ಸ್ಯಾನ್ ಫ್ರಾನ್ಸಿಸ್ಕೋಗೆ ತಲುಪಿಸಿದೆ. ಗುರುವಾರ ರಾತ್ರಿ 12.07ಕ್ಕೆ ವಿಮಾನ ಸ್ಯಾನ್ ಫ್ರಾನ್ಸಿಸ್ಕೋ ತಲುಪಿದೆ.
ವಿಮಾನದಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದಾಗಿ ಪ್ರಯಾಣಿಕರಿಗಾದ ಅನಾನುಕೂಲಕ್ಕೆ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದೆ.