ಉಡುಪಿ: ಕುಡಿಯುವ ನೀರು ಪೂರೈಕೆಗೆ ಪರಿಷ್ಕೃತ ಆದೇಶ
ಉಡುಪಿ, ಜೂ.8: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮರ್ಪಕ ವಿತರಣೆಗಾಗಿ ನಿಗದಿ ಪಡಿಸಿದ ಮೂರು ದಿನಗಳಿಗೊಮ್ಮೆ ರೇಷನಿಂಗ್ ವ್ಯವಸ್ಥೆಯನ್ನು ಇದೀಗ ಬಜೆ ಅಣೆಕಟ್ಟಿನಲ್ಲಿ ನೀರಿನ ಶೇಖರಣೆಯ ಕೊರತೆಯಿಂದ 5 ದಿನಗಳಿಗೊಮ್ಮೆ ವಿತರಿಸಲು ನಿರ್ಧರಿಸಲಾಗಿದೆ. ಅದರಂತೆ ಈ ಕೆಳಕಂಡ ಪ್ರದೇಶಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಲಾಗುವುದು.
ಜೂನ್ 9, 14 ಮತ್ತು 19ರಂದು ಪರ್ಕಳ, ಸೆಟ್ಟಿಬೆಟ್ಟು, ಅನಂತನಗರ, ಈಶ್ವರ ನಗರ, ವಿದ್ಯಾರತ್ನ ನಗರ, ಶೀಂಬ್ರ ಭಾಗಕ್ಕೆ, ಜೂನ್ 10, 15 ಮತ್ತು 20ರಂದು ಇಂದಿರಾನಗರ ಟ್ಯಾಂಕ್, ಅಜ್ಜರಕಾಡು, ಎಸ್.ಪಿ ಟ್ಯಾಂಕ್, ಪುತ್ತೂರು ಟ್ಯಾಂಕ್, ಗೋಪಾಲಪುರ, ಮೂಡುಬೆಟ್ಟು, ಹನುಮಂತ ನಗರ ಟ್ಯಾಂಕ್ನಿಂದ ಹನುಮಂತನಗರಕ್ಕೆ ಹಾಗೂ ಜೂನ್ 12, 17 ಮತ್ತು 22 ರಂದು ಕಲ್ಮಾಡಿ, ಕೊಡವೂರು, ದೊಡ್ಡಣಗುಡ್ಡೆ, ಪುತ್ತೂರು ಟ್ಯಾಂಕ್ನಿಂದ ಸಂತೆಕಟ್ಟೆ, ಸುಬ್ರಹ್ಮಣ್ಯ ನಗರ ಮತ್ತು ಕೊಡಂಕೂರು ವಾರ್ಡ್ಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುವುದು.
ಹೊಂಡಗಳಿಂದ ನೀರನ್ನು ಪಂಪಿಂಗ್ ಮೂಲಕ ಸರಬರಾಜು ಮಾಡಲಾಗುತ್ತಿರುವುದರಿಂದ ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ನಗರಸಭೆಯ ನೀರನ್ನು ಉಪಯೋಗಿಸುತ್ತಿದ್ದಲ್ಲಿ, ನೀರನ್ನು ಕುದಿಸಿ ಕುಡಿಯುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.