ಪ್ರತೀ ದಶಕದಲ್ಲಿ 0.02 ಡಿಗ್ರಿ ಹೆಚ್ಚಳ, ಜಾಗತಿಕ ತಾಪಮಾನದಲ್ಲಿ ಭಾರೀ ಏರಿಕೆ: ವಿಜ್ಞಾನಿಗಳ ಎಚ್ಚರಿಕೆ

ಪ್ಯಾರಿಸ್ : ದಾಖಲೆ ಮಟ್ಟದ ಹಸಿರುಮನೆ ಅನಿಲ ಹೊರಸೂಸುವಿಕೆ ಮತ್ತು ವಾಯುಮಾಲಿನ್ಯವು ಜಾಗತಿಕ ತಾಪಮಾನದಲ್ಲಿ ಭಾರೀ ಹೆಚ್ಚಳಕ್ಕೆ ಕಾರಣವಾಗಿದೆ ಎಂದು 50 ಉನ್ನತ ವಿಜ್ಞಾನಿಗಳು ಗುರುವಾರ ಎಚ್ಚರಿಸಿದ್ದಾರೆ.
2013ರಿಂದ 2022ರವರೆಗೆ ಮಾನವ ಪ್ರೇರಿತ ತಾಪಮಾನವು ಪ್ರತೀ ದಶಕಕ್ಕೆ 0.2 ಡಿಗ್ರಿ ಸೆಲ್ಶಿಯಸ್ನಷ್ಟು ಅಸಾಮಾನ್ಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಅದೇ ಅವಧಿಯಲ್ಲಿ ಸರಾಸರಿ ವಾರ್ಷಿಕ ಹೊರಸೂಸುವಿಕೆ ಸಾರ್ವಕಾಲಿಕ ಗರಿಷ್ಟ 54 ಶತಕೋಟಿ ಟನ್ಗಳಷ್ಟು ಇಂಗಾಲದ ಡೈಆಕ್ಸೈಡ್ ಅಥವಾ ಪ್ರತೀ ಸೆಕೆಂಡ್ಗೆ ಸುಮಾರು 1,700 ಟನ್ಗಳಿಗೆ ತಲುಪಿದೆ. ನಾವಿನ್ನೂ 1.5 ಸೆಲ್ಶಿಯಸ್ ತಾಪಮಾನದ ಮಟ್ಟದಲ್ಲಿ ಇಲ್ಲದಿದ್ದರೂ ಆ ಮಿತಿಯನ್ನು ಮೀರದೆ ಮನುಕುಲವು ಹೊರಸೂಸಬಹುದಾದ ಹಸಿರುಮನೆ ಅನಿಲಗಳ ಪ್ರಮಾಣ ಕೆಲ ವರ್ಷಗಳಲ್ಲೇ ಬರಿದಾಗಬಹುದು ಎಂದು ಅಧ್ಯಯನ ತಂಡದ ಮುಖ್ಯಸ್ಥ ಪಿಯರ್ಸ್ ಫಾರ್ಸ್ಟರ್ ಹೇಳಿದ್ದಾರೆ.
ಈ ವರ್ಷ ದುಬೈಯಲ್ಲಿ ನಡೆಯಲಿರುವ ಮಹತ್ವಪೂರ್ಣ ಸಿಒಪಿ28 ಹವಾಮಾನ ಶೃಂಗಸಭೆಯಲ್ಲಿ ಈ ವರದಿಯ ಬಗ್ಗೆ ಜಾಗತಿಕ ಮುಖಂಡರು ಚರ್ಚೆ ನಡೆಸಲಿದ್ದು ತಾಪಮಾನಕ್ಕೆ ಸಂಬಂಧಿಸಿದ 2015ರ ಪ್ಯಾರಿಸ್ ಒಪ್ಪಂದದ ಪ್ರಮುಖ ಅಂಶವಾದ ‘ಗ್ಲೋಬಲ್ ಸ್ಟಾಕ್ಟೇಕ್(ಹವಾಮಾನ ಬದಲಾವಣೆ ಕ್ರಿಯೆಗಳ ಪ್ರಭಾವದ ಪ್ರಸ್ತಾವಿತ 5 ವಾರ್ಷಿಕ ವಿಮರ್ಶೆ) ಗುರಿಯ ಕಡೆಗಿನ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ.
1.5 ಡಿಗ್ರಿ ಸೆಲ್ಶಿಯಸ್ ತಾಪಮಾನದ ಮಿತಿಯ ಒಳಗೆ ಇರಬೇಕಾದರೆ ಕಾರ್ಬನ್ ಡೈಆಕ್ಸೈಡ್, ಮಿಥೇನ್ ಮತ್ತು ಪಳೆಯುಳಿಕೆ ಇಂಧನಗಳನ್ನು ಸುಡುವ ಮೂಲಕ ಉತ್ಪತ್ತಿಯಾಗುವ ತಾಪಮಾನದ ಇತರ ಪ್ರಕ್ರಿಯೆಗಳ ಹೊರಸೂಸುವಿಕೆಯು 250 ಶತಕೋಟಿ ಟನ್ಗಳನ್ನು ಮೀರಬಾರದು ಎಂದು ವರದಿ ಹೇಳಿದೆ.
ವಿಪರ್ಯಾಸವೆಂದರೆ ಕಳೆದ ದಶಕದ ಒಂದು ದೊಡ್ಡ ಹವಾಮಾನ ಯಶಸ್ಸಿನ ಕಥೆಯು ಅಜಾಗರೂಕತೆಯಿಂದ ಜಾಗತಿಕ ತಾಪಮಾನದ ವೇಗವನ್ನು ಹೆಚ್ಚಿಸಿದೆ. ಕಲ್ಲಿದ್ದಲಿನ ಬಳಕೆಯಲ್ಲಿ ಕ್ರಮೇಣ ಇಳಿಕೆಯು ಶಕ್ತಿಯನ್ನು ಉತ್ಪಾದಿಸುವಾಗ ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ನಿಧಾನಗೊಳಿಸಿದೆ. ಆದರೆ ವಾಯುಮಾಲಿನ್ಯವು ಸೂರ್ಯನ ಕಿರಣಗಳ ಪ್ರಖರತೆಯ ಮಟ್ಟವನ್ನು ಭೂಮಿಗೆ ತಲುಪುವಾಗ ಕಡಿಮೆಗೊಳಿಸುತ್ತದೆ. ಎಲ್ಲಾ ಮೂಲಗಳಿಂದ ಧೂಳಿನ ಕಣವು ಸುಮಾರು ಅರ್ಧ ಡಿಗ್ರಿ ಸೆಲ್ಶಿಯಸ್ನಷ್ಟು ತಾಪಮಾನವನ್ನು ತಗ್ಗಿಸುವುದರಿಂದ ಗಾಳಿ ಸ್ವಚ್ಛವಾದಂತೆ ಸೂರ್ಯನ ಕಿರಣಗಳ ಪ್ರಖರತೆಯ ಪ್ರಮಾಣ ಹೆಚ್ಚುತ್ತದೆ ಎಂದು ವರದಿ ಹೇಳಿದೆ.
ದೀರ್ಘವಾದ ಮತ್ತು ಹೆಚ್ಚು ತೀವ್ರವಾದ ಶಾಖದ ಅಲೆಗಳು ಮುಂಬರುವ ದಶಕಗಳಲ್ಲಿ ದಕ್ಷಿಣ ಮತ್ತು ಆಗ್ನೇಯ ಏಶ್ಯಾದ ದೊಡ್ಡ ಪ್ರದೇಶಗಳಲ್ಲಿ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಸಮಭಾಜಕದಲ್ಲಿ ವ್ಯಾಪಿಸಿರುವ ಪ್ರದೇಶಗಳಾದ್ಯಂತ ಆತಂಕಕ್ಕೆ ಕಾರಣವಾಗಲಿದೆ ಎಂದು ಇತ್ತೀಚಿನ ಅಧ್ಯಯನದಲ್ಲಿ ದೃಢಪಟ್ಟಿದೆ.
ಹಸಿರುಮನೆ ಅನಿಲಗಳ ಹೆಚ್ಚಳ ಪ್ರಮಾಣ ನಿಧಾನಗೊಂಡಿದೆ ಎಂಬುದಕ್ಕೆ ಪುರಾವೆಗಳಿದ್ದರೂ ಮುಂಬರುವ ಹವಾಮಾನ ಶೃಂಗಸಭೆಗೂ ಮುನ್ನ ಈ ವರದಿಯ ಅಂಕಿಅಂಶಗಳು ಎಚ್ಚರಿಕೆಯ ಕರೆಗಂಟೆಯಾಗಬೇಕು ಎಂದು ಅಧ್ಯಯನ ತಂಡದ ಸದಸ್ಯೆ, ವಿಜ್ಞಾನಿ ಮಯಿಸಾ ರೊಜಾಸ್ ಕೊರಾಡಿ ಹೇಳಿದ್ದಾರೆ.