ಕೆನಡದಲ್ಲಿ ಇಂದಿರಾ ಗಾಂಧಿ ಹತ್ಯೆಯ ಸಂಭ್ರಮಾಚರಣೆ; ಉಗ್ರವಾದಿ ಶಕ್ತಿಗಳಿಗೆ ಆಶ್ರಯ ಒಳ್ಳೆಯದಲ್ಲ: ಜೈಶಂಕರ್

ಹೊಸದಿಲ್ಲಿ: ಕೆನಡದ ಬ್ರಾಂಪ್ಟನ್ ನಗರದಲ್ಲಿ ನಡೆದಿರುವ ಭಾರತದ ದಿವಂಗತ ಪ್ರಧಾನಿ ಇಂದಿರಾ ಗಾಂಧಿಯ ಹತ್ಯೆಯ ಸಂಭ್ರಮಾಚರಣೆಯನ್ನು ಭಾರತದ ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಗುರುವಾರ ಖಂಡಿಸಿದ್ದಾರೆ.
ಇಲ್ಲಿರುವ ದೊಡ್ಡ ಸಮಸ್ಯೆಯಿಂದರೆ, ಕೆನಡವು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಇಂಥ ಉಗ್ರವಾದಿ ಶಕ್ತಿಗಳಿಗೆ ನಿರಂತರವಾಗಿ ಆಶ್ರಯ ನೀಡುತ್ತಾ ಬಂದಿರುವುದು ಎಂದು ಅವರು ಹೇಳಿದರು. ‘‘ಇದು ಭಾರತ-ಕೆನಡ ಸಂಬಂಧಕ್ಕೆ ಒಳ್ಳೆಯದಲ್ಲ; ಇದು ಕೆನಡಕ್ಕೂ ಒಳ್ಳೆಯದಲ್ಲ’’ ಎಂದರು.
ಭಾರತದಲ್ಲಿರುವ ಕೆನಡ ರಾಯಭಾರಿ ಕ್ಯಾಮರೋನ್ ಮ್ಯಾಕೇ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ದ್ವೇಷ ಅಥವಾ ಹಿಂಸೆಯ ವೈಭವೀಕರಣಕ್ಕೆ ಕೆನಡದಲ್ಲಿ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ. ಇಂದಿರಾ ಗಾಂಧಿಯ ಹತ್ಯೆಯನ್ನು ಸಂಭ್ರಮಿಸಲು ಕೆನಡದಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿದೆ ಎನ್ನುವುದನ್ನು ತಿಳಿದು ‘‘ಆಘಾತ’’ವಾಗಿದೆ ಎಂದು ಅವರು ಹೇಳಿದ್ದಾರೆ. ‘‘ಇಂಥ ಚಟುವಟಿಕೆಗಳನ್ನು ನಾನು ಸ್ಪಷ್ಟ ಮಾತುಗಳಲ್ಲಿ ಖಂಡಿಸುತ್ತೇನೆ’’ ಎಂಬುದಾಗಿ ಅವರು ಟ್ವೀಟ್ ಒಂದರಲ್ಲಿ ಹೇಳಿದ್ದಾರೆ.
‘ಆಪರೇಶನ್ ಬ್ಲೂ ಸ್ಟಾರ್’ನ ವಾರ್ಷಿಕ ದಿನಕ್ಕೆ ಮುನ್ನ ಖಾಲಿಸ್ತಾನಿ ಬೆಂಬಲಿಗರೆನ್ನಲಾದವರು ಕೆನಡದ ಬ್ರಾಂಪ್ಟನ್ ಎಂಬಲ್ಲಿ ಏರ್ಪಡಿಸಿರುವ ಮೆರವಣಿಗೆಯ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಮೆರವಣಿಗೆಯಲ್ಲಿ, ದಿವಂಗತ ಪ್ರಧಾನಿ ಇಂದಿರಾ ಗಾಂಧಿಯ ಹತ್ಯೆಯನ್ನು ತೋರಿಸುವ ಸ್ತಬ್ಧ ಚಿತ್ರವೊಂದಿದೆ. ಇಂದಿರಾ ಗಾಂಧಿಯ ಪ್ರತಿಮೆಯು ರಕ್ತದಲ್ಲಿ ತೊಯ್ದಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ಸಿಖ್ ಉಗ್ರವಾದಿ ಧಾರ್ಮಿಕ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಮತ್ತು ಆತನ ಶಸ್ತ್ರಧಾರಿ ಬೆಂಬಲಿಗರನ್ನು ಅಮೃತಸರದ ಸ್ವರ್ಣ ದೇವಾಲಯದಿಂದ ಹೊರದಬ್ಬಲು ಭಾರತೀಯ ಸೇನೆಯು 1984ರಲ್ಲಿ ಜೂನ್ 1ರಿಂದ 6ರವರೆಗೆ ‘ಆಪರೇಶನ್ ಬ್ಲೂ ಸ್ಟಾರ್’ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅನುಮೋದನೆ ನೀಡಿದ್ದರು.
ಅದಾದ ತಿಂಗಳುಗಳ ಬಳಿಕ, ಇಂದಿರಾ ಗಾಂಧಿಯನ್ನು ಅವರ ಇಬ್ಬರು ಸಿಖ್ ಅಂಗರಕ್ಷಕರು ಹತ್ಯೆಗೈದರು.