ವರದಕ್ಷಿಣೆ ಕಿರುಕುಳ; ಆರೋಪಿಗೆ 17 ವರ್ಷ ಜೈಲು ಶಿಕ್ಷೆ

ಮಂಡ್ಯ, ಜೂ.8: ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಸಾವಿಗೆ ಕಾರಣನಾದ ಪತಿಗೆ ಶ್ರೀರಂಗಪಟ್ಟಣದ ಮೂರನೇ ಸೆಷೆನ್ಸ್ ನ್ಯಾಯಾಲಯ 17 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ನಿವಾಸಿ ಲಾರಿ ಚಾಲಕ ಲೋಕೇಶಚಾರಿ ಶಿಕ್ಷೆಗೆ ಗುರಿಯಾದ ವ್ಯಕ್ತಿಯಾಗಿದ್ದಾರೆ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಅಗಸರಹುಂಡಿ ಗ್ರಾಮದ ಸೋಮಾಚಾರಿ ಮಗಳು ಎಸ್.ಸುಜಾತ ಅವರನ್ನು ಲೋಕೇಶಚಾರಿಗೆ ಹತ್ತು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು.
ಲಾರಿ ಚಾಲಕನಾಗಿದ್ದ ಲೋಕೇಶಚಾರಿ ಸ್ವಂತ ಲಾರಿ ಖರೀದಿಸಬೇಕೆಂದು ಅಪೇಕ್ಷಿಸಿ ತವರಿನಿಂದ ಹಣ ತಂದುಕೊಡುವಂತೆ ಪತ್ನಿಗೆ ಹಿಂಸೆ ನೀಡುತ್ತಿದ್ದ ಎಂದು ಪತ್ನಿ ಸುಜಾತ ತನ್ನ ತಂದೆಯ ಬಳಿ ಹೇಳಿಕೊಂಡಿದ್ದಳು.
ಈ ಕುರಿತು ರಾಜಿಸಂಧಾನ ನಡೆಸಿದ್ದರೂ ಲೋಕೇಶಚಾರಿ ಪತ್ನಿಗೆ ನಿರಂತರ ಕಿರುಕುಳ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ 2015ರಲ್ಲಿ ಸುಜಾತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಆಕೆಯ ತಂದೆ ಸೋಮಚಾರಿ ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದದ ಮೂರನೇ ಸೆಷೆನ್ಸ್ ನ್ಯಾಯಾಧೀಶ ಗೋಪಾಲಕೃಷ್ಣ ರೈ ಆರೋಪಿಗೆ 17 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಅಂದಿನ ಪಾಂಡವಪುರ ಠಾಣೆ ಇನ್ಸ್‍ಪೆಕ್ಟರ್ ಆಗಿದ್ದ ಪ್ರಕಾಶ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದು, ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಪ್ರಫುಲ್ಲಾ ವಾದ ಮಂಡಿಸಿದ್ದರು.