ಮಗನ ಜತೆ ಪಲಾಯನ ಮಾಡಿದ ಅಪ್ರಾಪ್ತ ಬಾಲಕಿಯನ್ನು ವಶಕ್ಕೆ ನೀಡಿ: ನ್ಯಾಯಾಲಯಕ್ಕೆ ಮಹಿಳೆ ಮೊರೆ

ಚಂಡೀಗಢ: ತನ್ನ 18 ವರ್ಷ ವಯಸ್ಸಿನ ಮಗನ ಜತೆ ಪಲಾಯನ ಮಾಡಿದ ಅಪ್ರಾಪ್ತ ವಯಸ್ಸಿನ ಯುವತಿಯನ್ನು ವಶಕ್ಕೆ ನೀಡುವಂತೆ ಕೋರಿ ಹರ್ಯಾಣದ ಕರ್ನಲ್ ಜಿಲ್ಲೆಯ ಮಹಿಳೆಯೊಬ್ಬರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಯುವತಿ ಸರ್ಕಾರಿ ಸುರಕ್ಷಾ ಗೃಹದಲ್ಲಿದ್ದಾಳೆ.
ಭೈನಿ ಕಲಾನ್ ಗ್ರಾಮದ ಸರೋಜ್‍ದೇವಿ ಎಂಬ ಮಹಿಳೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿ, 14 ವರ್ಷ ವಯಸ್ಸಿನ ಬಾಲಕಿಯನ್ನು ತನ್ನ ಸುಪರ್ದಿಗೆ ನೀಡಿದರೆ, ಕಾನೂನುಬದ್ಧವಾಗಿ ಮದುವೆ ವಯಸ್ಸು ತಲುಪುವವರೆಗೆ ಬಾಲಕಿಗೆ ಅಗತ್ಯ ಶಿಕ್ಷಣ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಜೀವನ ಹಾಗೂ ಸ್ವಾತಂತ್ರ್ಯ ಕಾಪಾಡಲು ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಯುವತಿಗೆ 18 ವರ್ಷಗಳಾದಾಗ ಮಗನ ಜತೆ ವಿವಾಹ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ.
ಮಹಿಳೆಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮರ್‍ಜೋತ್ ಭಟ್ಟಿ ನೇತೃತ್ವದ ರಜಾಕಾಲದ ಪೀಠ ಸರ್ಕಾರಕ್ಕೆ ನೋಟಿಸ್ ನೀಡಿ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದಾರೆ. ಮುಂದಿನ ವಿಚಾರಣೆ ಜುಲೈ 5ಕ್ಕೆ ನಡೆಯಲಿದೆ.
ಸರೋಜ್ ಅವರ ಮಗ ಅಪ್ರಾಪ್ತ ವಯಸ್ಸಿನ ಬಾಲಕಿ ಜತೆ ಪ್ರೇಮಸಂಬಂಧ ಹೊಂದಿದ್ದ. ಅದರೆ ಆಕೆಯ ಪೋಷಕರು ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಬೇರೆ ವ್ಯಕ್ತಿಯ ಜತೆ ಆಕೆಯ ವಿವಾಹ ನೆರವೇರಿಸಲು ಬಯಸಿದ್ದರು. ಬಾಲಕಿ ಮೇ 30ರಂದು ಮನೆ ಬಿಟ್ಟು ಅರ್ಜಿದಾರರ ಮಗನ ಜತೆ ಅವರ ಮನೆಯಲ್ಲಿ ವಾಸ ಮಾಡಲು ಆರಂಭಿಸಿದಳು. ಬಾಲಕಿಯ ಮನೆಯವರು ಪೊಲೀಸರಿಗೆ ದೂರು ನೀಡಿದ ಬಳಿಕ, ಆಕೆಯನ್ನು ಸೋನಿಪತ್‍ನಲ್ಲಿರುವ ಸರ್ಕಾರಿ ಸುರಕ್ಷಾಗೃಹಕ್ಕೆ ಕಳುಹಿಸಲಾಗಿತ್ತು.







