ಮನೆಯೊಳಗೆ ಪಾತ್ರೆಯಲ್ಲಿ ದೇಹದ ತುಂಡುಗಳಿದ್ದವು...": ಮುಂಬೈ ಮಹಿಳೆಯ ಹತ್ಯೆಯ ಭಯಾನಕತೆ ತೆರೆದಿಟ್ಟ ಪೊಲೀಸರು

ಮುಂಬೈ: ಮುಂಬೈನಲ್ಲಿ ತನ್ನೊಂದಿಗೆ ಸಹಜೀವನ ನಡೆಸುತ್ತಿದ್ದ ಮಹಿಳೆಯನ್ನು ಕೊಂದಿರುವ ಆರೋಪಿ ಮರ ಕಡಿಯುವ ಯಂತ್ರವನ್ನು ಬಳಸಿ ಶವವನ್ನು ತುಂಡುಗಳಾಗಿ ಕತ್ತರಿಸಿದ್ದ . ಯಾವುದೇ ದುರ್ವಾಸನೆ ಬರದಂತೆ ದೇಹವನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿ ನಂತರ ಅವುಗಳನ್ನು ವಿಲೇವಾರಿ ಮಾಡಲು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಟ್ಟಿದ್ದ ಎಂಬ ಭಯಾನಕ ವಿಚಾರವನ್ನು ಮುಂಬೈ ಪೊಲೀಸರು ತೆರೆದಿಟ್ಟಿದ್ದಾರೆ.
ಭೀಕರ ಕೊಲೆ ಪ್ರಕರಣವೊಂದರಲ್ಲಿ ಮಹಾರಾಷ್ಟ್ರದ ಥಾಣೆಯಲ್ಲಿ 32 ವರ್ಷದ ಮಹಿಳೆಯನ್ನು ಆಕೆಯೊಂದಿಗೆ ವಾಸಿಸುತ್ತಿದ್ದ 56 ವರ್ಷದ ವ್ಯಕ್ತಿ ಬರ್ಬರವಾಗಿ ಹತ್ಯೆ ಮಾಡಿ ನಂತರ ದೇಹವನ್ನು ತುಂಡು-ತುಂಡುಗಳಾಗಿ ಕತ್ತರಿಸಿದ್ದಾನೆ.
ಶಂಕಿತ ಆರೋಪಿಯನ್ನು ಮನೋಜ್ ಸಾನೆ ಎಂದು ಗುರುತಿಸಲಾಗಿದ್ದು, ಕಳೆದ ಮೂರು ವರ್ಷಗಳಿಂದ ಮೀರಾ ರೋಡ್ ಪ್ರದೇಶದ ಆಕಾಶಗಂಗಾ ಕಟ್ಟಡದ ಬಾಡಿಗೆ ಫ್ಲಾಟ್‌ನಲ್ಲಿ ಸರಸ್ವತಿ ವೈದ್ಯ ಅವರೊಂದಿಗೆ ವಾಸವಾಗಿದ್ದ.
ಮೀರಾ-ಭಾಯಂದರ್‌ನ ಉಪ ಪೊಲೀಸ್ ಕಮಿಷನರ್ (ಡಿಸಿಪಿ) ಜಯಂತ್ ಬಜ್ ಬಾಲೆ ANI ಜೊತೆ ಮಾತನಾಡುತ್ತಾ, ಆರೋಪಿಯು ದೇಹದ ತುಂಡುಗಳನ್ನು ಕುಕ್ಕರ್ ನಲ್ಲಿ ಬೇಯಿಸಿದ್ದು ನಿಜ, ಆದರೆ ಆತ ಮಹಿಳೆಯ ದೇಹದ ತುಂಡುಗಳನ್ನು ನಾಯಿಗಳಿಗೆ ಎಸೆದಿರಲಿಲ್ಲ ಎಂದು ಹೇಳಿದರು.
"ನಾವು ಮನೆಯೊಳಗೆ ಪ್ರವೇಶಿಸಿದಾಗ ಪಾತ್ರೆಗಳಲ್ಲಿ ಹಲವಾರು ದೇಹದ ತುಂಡುಗಳು ಕಂಡುಬಂದಿವೆ. ಆರೋಪಿ ಮನೋಜ್ ಸಾನೆ ತನ್ನೊಂದಿಗೆ ವಾಸಿಸುತ್ತಿದ್ದ ಸರಸ್ವತಿ ವೈದ್ಯಳನ್ನು ಕೊಂದು ಮರವನ್ನು ಕಡಿಯುವ ಯಂತ್ರದ ಮೂಲಕ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾನೆ. ಹೆಚ್ಚಿನ ತನಿಖೆಗಾಗಿ ದೇಹದ ಭಾಗಗಳನ್ನು ಜೆಜೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಆರೋಪಿಯನ್ನು ಬಂಧಿಸಿ ಜೂನ್ 16 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ’’ ಎಂದು ಬಜ್ ಬಾಲೆ ಹೇಳಿದರು.
ಪೊಲೀಸರ ಪ್ರಕಾರ, ಆರೋಪಿಯು ಮಹಿಳೆಯ ದೇಹದ ತುಂಡುಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿ, ನಂತರ ಅವುಗಳನ್ನು ವಿಲೇವಾರಿ ಮಾಡಲು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಟ್ಟಿದ್ದ.
"ನಿನ್ನೆ ನಮಗೆ ಸೊಸೈಟಿಯ ಫ್ಲಾಟ್‌ನಿಂದ ದುರ್ವಾಸನೆಯ ಕುರಿತು ವರದಿ ಬಂದಿದೆ, ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದಾಗ ಅಡುಗೆಮನೆಯಲ್ಲಿ ಬಹಳಷ್ಟು ಪಾತ್ರೆಗಳು ಹಾಗೂ ಬಕೆಟ್‌ಗಳಲ್ಲಿ ಶವದ ತುಂಡುಗಳಿರುವುದು ಪತ್ತೆಯಾಗಿದೆ. ತನಿಖೆಯಲ್ಲಿ ಜೋಡಿಯೊಂದು ಅಲ್ಲಿ ವಾಸವಾಗಿದ್ದು, ಅವರನ್ನು ಗುರುತಿಸಲಾಗಿದೆ.ಈ ಸಂಬಂಧ ನಾವು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ’ಎಂದು ಪೊಲೀಸರು ತಿಳಿಸಿದ್ದಾರೆ.