ಹುಡುಗಿಯರು ಸಣ್ಣ ವಯಸ್ಸಿನಲ್ಲಿ ವಿವಾಹವಾಗಿ, 17 ವರ್ಷದಲ್ಲೇ ಮಗು ಹೊಂದುತ್ತಿದ್ದರು ಎಂದ ಹೈಕೋರ್ಟ್ ನ್ಯಾಯಾಧೀಶ
ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತ ಅಪೀಲು ವಿಚಾರಣೆ ವೇಳೆ ಮನುಸ್ಮೃತಿ ಉಲ್ಲೇಖಿಸಿದ ನ್ಯಾಯಾಲಯ

ಅಹ್ಮದಾಬಾದ್: ಒಂದು ಕಾಲದಲ್ಲಿ ಹುಡುಗಿಯರು ಸಣ್ಣ ವಯಸ್ಸಿನಲ್ಲಿ ವಿವಾಹವಾಗುವುದು ಹಾಗೂ 17 ವರ್ಷ ಆಗುವುದಕ್ಕಿಂತ ಮುಂಚೆ ಮಗುವನ್ನು ಪಡೆಯುವುದು ಸಾಮಾನ್ಯವಾಗಿತ್ತು, ಎಂದು ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಸಮೀರ್ ದವೆ ಹೇಳಿದ್ದಾರೆ. ಗರ್ಭಪಾತ ಮಾಡಿಸಲು ಅನುಮತಿ ಕೋರಿ ಅಪ್ರಾಪ್ತೆ ಅತ್ಯಾಚಾರ ಸಂತ್ರಸ್ತೆಯೊಬ್ಬಳ ಅರ್ಜಿಯನ್ನು ವಿಚಾರಣೆ ನಡೆಸುವ ಸಂದರ್ಭ ಅವರು ಹಾಗೆ ಹೇಳಿದ್ದಾರೆ.
ಬಾಲಕಿ ಮತ್ತಾಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಆರೋಗ್ಯವಂತವಾಗಿದ್ದರೆ ಈ ಅರ್ಜಿಯನ್ನು ತಾವು ಅನುಮತಿಸದೇ ಇರಬಹುದು ಎಂಬ ಸುಳಿವನ್ನು ನೀಡಿದ ನ್ಯಾಯಮೂರ್ತಿ ಸಮೀರ್ ದವೆ ತಾವು ಮನುಸ್ಮೃತಿಯನ್ನೂ ಓದಿರುವುದಾಗಿ ಹೇಳಿದರು.
ಅತ್ಯಾಚಾರ ಸಂತ್ರಸ್ತೆ 16 ವರ್ಷ ಹಾಗೂ 11 ತಿಂಗಳು ವಯಸ್ಸಿನವಳಾಗಿದ್ದು ಆಕೆ ಏಳು ತಿಂಗಳ ಗರ್ಭಿಣಿಯಾಗಿದ್ದಾಳೆ. ಸಂತ್ರಸ್ತೆಯ ತಂದೆ ಪುತ್ರಿಗೆ ಅಬಾರ್ಷನ್ ಮಾಡಿಸಲು ಕೋರ್ಟ್ ಅನುಮತಿ ಕೋರಿದ್ದರು. ಗರ್ಭ ಧರಿಸಿದ ನಂತರದ 24 ವಾರ ಅವಧಿಯಲ್ಲಿ ಗರ್ಭಪಾತ ನಡೆಸಬಹುದಾದರೆ ನಂತರ ಗರ್ಭಪಾತಕ್ಕೆ ಕೋರ್ಟ್ ಅನುಮತಿ ಬೇಕಿರುವುದರಿಂದ ಅವರು ನ್ಯಾಯಾಲಯದ ಕದ ತಟ್ಟಿದ್ದರು.
ಹುಡುಗಿಯ ವಯಸ್ಸನ್ನು ಪರಿಗಣಿಸಿ ಈ ವಿಚಾರದ ಶೀಘ್ರ ವಿಚಾರಣೆ ನಡೆಸಬೇಕೆಂದೂ ಅರ್ಜಿದಾರರ ಪರ ವಕೀಲರು ಬುಧವಾರ ಹೇಳಿದರು.
“ನಾವು 21ನೇ ಶತಮಾನದಲ್ಲಿರುವುದರಿಂದ ಇಷ್ಟೊಂದು ಆತಂಕವಿದೆ, ನಿಮ್ಮ ತಾಯಿ ಅಥವಾ ಮುತ್ತಜ್ಜಿ ಬಳಿ ಕೇಳಿ. ಹದಿನಾಲ್ಕು-ಹದಿನೈದು ಗರಿಷ್ಠ ವಯಸ್ಸಾಗಿತ್ತು (ವಿವಾಹಕ್ಕೆ) ಮತ್ತು ಹುಡುಗಿಯರು ತಮ್ಮ ಮೊದಲ ಮಗುವನ್ನು 17 ವರ್ಷಕ್ಕಿಂತ ಮೊದಲೇ ಪಡೆಯುತ್ತಿದ್ದರು. ಮತ್ತು ಹುಡುಗರಿಂತ ಮುಂಚಿತವಾಗಿ ಹುಡುಗಿಯರು ಪ್ರಬುದ್ಧರಾಗುತ್ತಾರೆ. ನೀವು ಓದಿರದೇ ಇರಬಹುದು, ಆದರೆ ಒಮ್ಮೆ ಮನುಸ್ಮೃತಿಯನ್ನು ನೀವು ಓದಬೇಕು,” ಎಂದು ಅವರು ಹೇಳಿದರು.
ಆಕೆಯ ಪ್ರಸವದ ನಿರೀಕ್ಷಿತ ದಿನಾಂಕ ಆಗಸ್ಟ್ 16 ಆಗಿರುವುದರಿಂದ ಈ ಕುರಿತು ತಮ್ಮ ಚೇಂಬರಿನಲ್ಲಿ ವೈದ್ಯರ ಜೊತೆ ಸಮಾಲೋಚಿಸಿರುವುದಾಗಿ ನ್ಯಾಯಾಧೀಶರು ವಕೀಲರಿಗೆ ತಿಳಿಸಿದರು.
“ಹೊಟ್ಟೆಯಲ್ಲಿರುವ ಮಗು ಅಥವಾ ಹುಡುಗಿಗೆ ಗಂಭೀರ ಸಮಸ್ಯೆಯಿದ್ದರೆ ಕೋರ್ಟ್ ಅನುಮತಿಸಬಹುದಾಗಿತ್ತು (ಗರ್ಭಪಾತಕ್ಕೆ). ಆದರೆ ಇಬ್ಬರಿಗೂ ಯಾವುಧೇ ಸಮಸ್ಯೆಯಿಲದೇ ಇದ್ದಲ್ಲಿ ಇಂತಹ ಆದೇಶ ಹೊರಡಿಸುವುದು ಕಷ್ಟ,” ಎಂದು ಹೇಳಿದರು.
ಹುಡುಗಿಯನ್ನು ವೈದ್ಯರ ಒಂದು ತಂಡ ಪರೀಕ್ಷಿಸಿ ಆಕೆಗೆ ಗರ್ಭಪಾತ ನಡೆಸುವುದು ಸೂಕ್ತವೇ ಎಂದು ತಿಳಿಯಲು ಕ್ರಮಕೈಗೊಳ್ಳುವಂತೆ ರಾಜಕೋಟ್ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಕೋರ್ಟ್ ಆದೇಶಿಸಿದೆ.
ಆಕೆಯ ಒಸ್ಸಿಫಿಕೇಶನ್ ಪರೀಕ್ಷೆ ನಡೆಸಿ ಆಕೆಯ ಮಾನಸಿಕ ಪರಿಸ್ಥಿತಿಯನ್ನೂ ಪರಿಶೀಲಿಸಬೇಕು ಹಾಗೂ ಮುಂದಿನ ವಿಚಾರಣೆಯ ದಿನಾಂಕವಾದ ಜೂನ್ 15ರೊಳಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
“ಇಬ್ಬರೂ ಆರೋಗ್ಯವಂತರಾಗಿದ್ದರೆ ಅನುಮತಿ ದೊರೆಯದು. ಆಕೆ ಮಗುವಿಗೆ ಜನ್ಮ ನೀಡಿದರೆ ಆ ಮಗುವನ್ನು ಯಾರು ನೋಡುತ್ತಾರೆ. ಇಂತಹ ಮಕ್ಕಳಿಗೆ ಯಾವುದೇ ಸರ್ಕಾರಿ ಯೋಜನೆಗಳಿವೆಯೇ ಎಂದು ಪರಿಶೀಲಿಸುತ್ತೇನೆ. ಯಾರಾದರೂ ಮಗುವನ್ನು ದತ್ತು ಪಡೆಯಬಹುದೇ ಎಂದೂ ಪರಿಶೀಲಿಸಿ,” ಎಂದು ಹುಡುಗಿಯ ಪರ ವಕೀಲರಿಗೆ ನ್ಯಾಯಾಧೀಶರು ಸಲಹೆ ನೀಡಿದ್ದಾರೆ.