ಫೋನ್ ಸಂಭಾಷಣೆಯಲ್ಲಿ ‘ಬಾಂಬ್’ ಪದ ಪ್ರಯೋಗಿಸಿದ ವಿಮಾನ ಪ್ರಯಾಣಿಕನನ್ನು ಬಂಧಿಸಿದ ದಿಲ್ಲಿ ಪೊಲೀಸರು

ಹೊಸದಿಲ್ಲಿ: ವಿಸ್ತಾರಾ ವಿಮಾನದಲ್ಲಿ ದುಬೈಗೆ ತೆರಳುತ್ತಿದ್ದ ಪುರುಷ ಪ್ರಯಾಣಿಕನನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಜೂನ್ 7 ರಂದು ಬಂಧಿಸಲಾಯಿತು. ಫೋನ್ ಕರೆಯಲ್ಲಿ ವ್ಯಕ್ತಿಯೊಬ್ಬರು ಬಾಂಬ್ ಕುರಿತು ಪ್ರಸ್ತಾಪಿಸಿದ್ದಾರೆ ಎಂದು ಮಹಿಳಾ ಸಹ ಪ್ರಯಾಣಿಕರು ದೂರಿದರು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪಿಲಿಭಿತ್ ಮೂಲದ ಅಝೀಂ ಖಾನ್ ರನ್ನು ಬಂಧಿಸಲಾಯಿತು.
ಅಝೀಂ ಖಾನ್ ವಿಸ್ತಾರಾ ವಿಮಾನ ಸಂಖ್ಯೆ ಯುಕೆ-941 ರಲ್ಲಿ ದಿಲ್ಲಿಯಿಂದ ಮುಂಬೈ ಮಾರ್ಗವಾಗಿ ದುಬೈಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ತನ್ನ ತಾಯಿಯೊಂದಿಗೆ ದೂರವಾಣಿ ಸಂಭಾಷಣೆ ಮಾಡುತ್ತಿರುವುದನ್ನು ಕೇಳಿಸಿಕೊಂಡ ಸಹ ಪ್ರಯಾಣಿಕರೊಬ್ಬರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.
" ಬಾಂಬ್ ಎಂದು ಹೆದರಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ನನ್ನ ಬ್ಯಾಗ್‌ನಿಂದ ತೆಂಗಿನಕಾಯಿಯನ್ನು ಹೊರ ತೆಗೆದಿದೆ. ಆದರೆ ನನ್ನ ಬ್ಯಾಗ್‌ನಲ್ಲಿದ್ದ ಗುಟ್ಕಾಗೆ (ತಂಬಾಕು ಉತ್ಪನ್ನ) ಅನುಮತಿ ನೀಡಿದೆ" ಎಂದು ಪ್ರಯಾಣಿಕ ಖಾನ್ ತನ್ನ ತಾಯಿಗೆ ತಿಳಿಸಿದ್ದಾಗಿ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಕೆಲಸದ ನಿಮಿತ್ತ ದುಬೈಗೆ ತೆರಳುತ್ತಿದ್ದ ಪ್ರಯಾಣಿಕ ತನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಆತನ ಪಕ್ಕದಲ್ಲಿ ಕುಳಿತಿದ್ದ ಸಹ ಪ್ರಯಾಣಿಕ ಮಹಿಳೆಗೆ ಸಂಭಾಷಣೆ ಕೇಳಿಸಿದೆ. ಬಾಂಬ್ ಇರಬಹುದೆಂಬ ಭಯದಿಂದ ಸಿಐಎಸ್‌ಎಫ್ ತನ್ನ ಬ್ಯಾಗ್‌ನಲ್ಲಿ ತೆಂಗಿನಕಾಯಿಯನ್ನು ಸಾಗಿಸಲು ಬಿಡಲಿಲ್ಲ. ಆದರೆ ಅವರು ತಮ್ಮ ಬ್ಯಾಗ್‌ನಲ್ಲಿ ಇರಿಸಲಾಗಿದ್ದ ಪಾನ್ ಮಸಾಲವನ್ನು ಅನುಮತಿಸಿದರು ಎಂದು ಅವರು ತನ್ನ ತಾಯಿಗೆ ತಿಳಿಸಿದರು” ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು.
'ಬಾಂಬ್' ಎಂಬ ಪದವನ್ನು ಕೇಳಿ ಗಾಬರಿಗೊಂಡ ಮಹಿಳಾ ಸಹ ಪ್ರಯಾಣಿಕರೊಬ್ಬರು ತಕ್ಷಣ ವಿಮಾನದಲ್ಲಿದ್ದ ವಿಮಾನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ನಂತರ ಇಬ್ಬರೂ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು ಹಾಗೂ ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲಾಯಿತು. ಆದರೆ ಏನೂ ಕಂಡುಬಂದಿಲ್ಲ. ನಂತರ ಪುರುಷ ಪ್ರಯಾಣಿಕನನ್ನು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಈ ಪ್ರಕ್ರಿಯೆಯಲ್ಲಿ ವಿಮಾನವು ಟೇಕಾಫ್ ಮಾಡಲು ಅನುಮತಿ ಪಡೆಯುವ ಮೊದಲು ಎರಡು ಗಂಟೆಗಳ ಕಾಲ ವಿಳಂಬವಾಯಿತು. ಪುರುಷ ಪ್ರಯಾಣಿಕರನ್ನು ಐಜಿಐ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ದಿಲ್ಲಿ ಪೊಲೀಸರು ತನಿಖೆ ನಡೆಸಿದರೂ ಏನೂ ಪತ್ತೆಯಾಗಿಲ್ಲ. ವಿಮಾನವನ್ನು ಕೂಲಂಕುಷವಾಗಿ ತಪಾಸಣೆ ಮಾಡಿದರೂ ಮಹಿಳೆ ವಿಮಾನ ಹತ್ತಲು ನಿರಾಕರಿಸಿ ಮುಂಬೈಗೆ ಮತ್ತೊಂದು ಟಿಕೆಟ್ ಬುಕ್ ಮಾಡಿದ್ದಾರೆ.