ಉಳ್ಳಾಲ: ಜೂ.11 ರಂದು ಸ್ಪೀಕರ್ ಯು.ಟಿ ಖಾದರ್ ಗೆ ಪೌರ ಸನ್ಮಾನ

ಉಳ್ಳಾಲ: ಮಂಗಳೂರು ಕ್ಷೇತ್ರ ದಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆ ಆಗಿ ಪ್ರಸಕ್ತ ವಿಧಾನಸಭಾ ಅಧ್ಯಕ್ಷರಾಗಿರುವ ಯು.ಟಿ ಖಾದರ್ ಅವರಿಗೆ ಉಳ್ಳಾಲ ನಗರ ಪೌರ ಸನ್ಮಾನ ಸಮಿತಿ ಇದರ ಆಶ್ರಯದಲ್ಲಿ ಪೌರ ಸನ್ಮಾನ ಕಾರ್ಯಕ್ರಮ ಜೂನ್ 11 ರಂದು ಭಾನುವಾರ ಸಂಜೆ 6 ಗಂಟೆಗೆ ಉಳ್ಳಾಲ ನಗರ ಸಭೆ ಮೈದಾನದಲ್ಲಿ ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಈಶ್ವರ್ ಉಳ್ಳಾಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಯುಟಿ ಖಾದರ್ ವಿಧಾನ ಸಭೆ ಅಧ್ಯಕ್ಷ ರಾಗಿ ಆಯ್ಕೆ ಆಗಿರುವುದರಿಂದ ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ಸಾಮರಸ್ಯ ಹಾಗೂ ಗೌರವದ ನಡವಳಿಗೆ ಮುಖ್ಯಸ್ಥರಾಗಿದ್ದಾರೆ. ಉಳ್ಳಾಲದ ಶ್ರೀ ಸೋಮನಾಥ ದೇವಸ್ಥಾನ, ಸಯ್ಯಿದ್ ಮದನಿ ದರ್ಗಾ ಮತ್ತು ಸಂತ ಸೆಬಾಸ್ಟಿಯನ್ ಚರ್ಚ್ ಸಹಿತ ಸರ್ವ ಧರ್ಮಗಳ ಧಾರ್ಮಿಕತೆಯ ಮೂಲ ನೆಲದಲ್ಲಿ ಎಲ್ಲಾ ಜಾತಿ ವರ್ಗಗಳ ಮುಂದಾಳುತ್ವದಲ್ಲಿ ಈ ಪೌರ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಉಳ್ಳಾಲ ಬ್ಲಾಕ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಾಂಗ್ರೆಸ್ ಮುಖಂಡರಾದ ಮುಸ್ತಫಾ ಉಳ್ಳಾಲ, ಡೆನ್ನಿಸ್ ಡಿಸೋಜ, ಯೂಸುಫ್ ಉಳ್ಳಾಲ, ಅಯ್ಯೂಬ್ ಮಂಚಿಲ, ಮನ್ಸೂರ್ ಉಸ್ಮಾನ್ ಕಲ್ಲಾಪು, ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು