ಒಡಿಶಾ ರೈಲು ದುರಂತ ಕುರಿತು ಸುಳ್ಳು ಸುದ್ದಿ ಹರಡಿದ ಆರೋಪ: ಬಿಜೆಪಿ ಬೆಂಬಲಿಗ ವಕೀಲನ ಬಂಧನ

ಚೆನ್ನೈ: ಒಡಿಶಾದ ಬಾಲಾಸೋರ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ರೈಲು ದುರಂತದ ಕುರಿತು ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಬಿಜೆಪಿ ಬೆಂಬಲಿಗನೆಂದು ಗುರುತಿಸಲಾದ ವಕೀಲನೊಬ್ಬನನ್ನು ತಮಿಳುನಾಡು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ರೈಲು ಅಪಘಾತದ ನಂತರ ಬಹನಗ ಬಜಾರ್ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಮೊಹಮ್ಮದ್ ಶರೀಫ್ ಅಹ್ಮದ್ ಎಂಬವರು ತಲೆಮರೆಸಿಕೊಂಡಿದ್ದಾರೆ ಹಾಗೂ ಅವರನ್ನು ಪ್ರಶ್ನಿಸಬೇಕು ಎಂಬ ಟ್ವೀಟ್ ಅನ್ನು ಕನ್ಯಾಕುಮಾರಿ ಜಿಲ್ಲೆಯ ತುಕ್ಕಲೈ ಎಂಬಲ್ಲಿನ ಸೆಂಥಿಲ್ ಕುಮಾರ್ ಎಂಬ ಈ ವ್ಯಕ್ತಿ ಮಾಡಿದ್ದ.
ಆದರೆ ಅಪಘಾತ ಸಂಭವಿಸಿದ ಸಂದರ್ಭ ಸ್ಟೇಷನ್ ಸುಪರಿಂಟೆಂಡೆಂಟ್ ಆಗಿ ಎಸ್ ಬಿ ಮೊಹಂತಿ ಹಾಗೂ ಸ್ಟೇಷನ್ ಮಾಸ್ಟರ್ ಆಗಿ ಎಸ್ ಕೆ ಪಟ್ನಾಯಕ್ ಎಂಬವರಿದ್ದರು ಎಂದು ತಿಳಿದು ಬಂದಿತ್ತು. ಅಷ್ಟೇ ಅಲ್ಲದೆ ಈ ನಿಲ್ದಾಣದಲ್ಲಿ ಮೊಹಮ್ಮದ್ ಶರೀಫ್ ಅಹ್ಮದ್ ಹೆಸರಿನ ಯಾವುದೇ ಉದ್ಯೋಗಿ ಇರಲಿಲ್ಲ.
ದಿನೇಶ್ ಕುಮಾರ್ ಎಂಬ ಡಿಎಂಕೆ ಸದಸ್ಯ ಪೊಲೀಸ್ ದೂರು ಸಲ್ಲಿಸಿ ಧಾರ್ಮಿಕ ಒಡಕು ಮತ್ತು ದ್ವೇಷ ಹಬ್ಬಿಸಿ ಈ ರೀತಿಯ ಸುಳ್ಳು ಸುದ್ದಿಯನ್ನು ಟ್ವಿಟರ್‌ನಲ್ಲಿ ಹರಡಲಾಗಿದೆ ಎಂದು ಆರೋಪಿಸಿದ್ದರು.
ತುಕ್ಕಲೈ ಪೊಲೀಸರು ಐಪಿಸಿ ಸೆಕ್ಷನ್ 153, 153ಎ, 505 (1) ಹಾಗೂ 505(2) ಅನ್ವಯ ಪ್ರಕರಣ ದಾಖಲಿಸಿ ವಕೀಲನನ್ನು ಬಂಧಿಸಿದ್ದಾರೆ.
ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.