ಪ್ರತಿಭಟನಾನಿರತ ಕುಸ್ತಿಪಟುಗಳಿಂದ ಯಾವುದೇ ಬಗೆಯ ದ್ವೇಷ ಭಾಷಣ ಅಪರಾಧ ಜರುಗಿಲ್ಲ: ನ್ಯಾಯಾಲಯಕ್ಕೆ ಪೊಲೀಸರಿಂದ ವರದಿ

ಹೊಸ ದಿಲ್ಲಿ: ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ವಿನೇಶ್ ಫೋಗಟ್, ಬಜರಂಗ್ ಪುನಿಯ ಹಾಗೂ ಸಾಕ್ಷಿ ಮಲಿಕ್ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಬೇಕು ಎಂದು ನ್ಯಾಯಾಲಯವೊಂದರಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಕ್ರಮ ಕೈಗೊಂಡ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ತನ್ನ ವರದಿಯಲ್ಲಿ, "ಜಂತರ್ ಮಂತರ್ ಬಳಿ ಕುಸ್ತಿ ಪಟುಗಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಇದು ದ್ವೇಷ ಭಾಷಣ ವರ್ಗಕ್ಕೆ ಸೇರುತ್ತದೆ. ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲುವ ಬೆದರಿಕೆ ಹಾಕಿರುವುದಕ್ಕೆ ಇದು ಸಾಕ್ಷಿಯಾಗಿದೆ" ಎಂದು ದೂರುದಾರರು ಆರೋಪಿಸಿದ್ದಾರೆ ಎಂದು ತಿಳಿಸಿದೆ.
ಆದರೆ, ದೂರುದಾರರು ಒದಗಿಸಿರುವ ವಿಡಿಯೊದಲ್ಲಿ ಕುಸ್ತಿ ಪಟುಗಳು ಘೋಷಣೆ ಕೂಗಿರುವುದು ಕಂಡು ಬಂದಿಲ್ಲ ಹಾಗೂ ದ್ವೇಷ ಭಾಷಣದ ಅಪರಾಧ ಎಸಗಿಲ್ಲ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.
"ದೂರಿನ ಸಾರಾಂಶ ಹಾಗೂ ದೂರುದಾರರು ಒದಗಿಸಿರುವ ವಿಡಿಯೊ ತುಣುಕನ್ನು ಪರಿಶೀಲಿಸಿದಾಗ ಯಾವುದೇ ದ್ವೇಷ ಭಾಷಣದ ಸಂಜ್ಞೇಯ ಅಪರಾಧ ಜರುಗಿಲ್ಲ. ಆ ತುಣುಕಿನಲ್ಲಿ ಪ್ರತಿಭಟನಾನಿರತ ಬಜರಂಗ್ ಪುನಿಯ, ವಿನೇಶ್ ಫೋಗಟ್ ಸೇರಿದಂತೆ ಇತರ ಕುಸ್ತಿ ಪಟುಗಳು ಅಂತಹ ಘೋಷಣೆಗಳನ್ನು ಕೂಗಿರುವುದು ಕಂಡು ಬಂದಿಲ್ಲ" ಎಂದು ತಮ್ಮ ವರದಿಯಲ್ಲಿ ಪೊಲೀಸರು ತಿಳಿಸಿದ್ದಾರೆ.
ಸದರಿ ಅರ್ಜಿಯನ್ನು ವಜಾಗೊಳಿಸುವಂತೆ ಪೊಲೀಸರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ. ಈ ಅರ್ಜಿಯನ್ನು'ಅಟಲ್ ಜನ್ ಪಾರ್ಟಿ'ಯ ಮುಖ್ಯಸ್ಥ ಎಂದು ಹೇಳಿಕೊಂಡಿರುವ ಬಾಮ್ ಬಾಮ್ ಮಹಾರಾಜ್ ನೌಹಾತಿಯ ಎಂಬುವವರು ಸಲ್ಲಿಸಿದ್ದಾರೆ. ಈ ಅರ್ಜಿಯ ಮರು ವಿಚಾರಣೆಯನ್ನು ಜುಲೈ 7ರಂದು ನಿಗದಿಗೊಳಿಸಲಾಗಿದೆ.