ಮೀನುಗಾರರ ಹಕ್ಕುಪತ್ರಕ್ಕೆ ರಿಯಾಯಿತಿ ದರ ನಿಗದಿಗೊಳಿಸುವಂತೆ ಕಂದಾಯ ಸಚಿವರಿಗೆ ಮನವಿ

ಉಡುಪಿ, ಜೂ.9: ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಡಿ ಕನ್ಯಾಣ ಗ್ರಾಪಂ ವ್ಯಾಪ್ತಿಯ ಕೋಡಿ ಗ್ರಾಮದ ಬಡ ಮೀನುಗಾರರ ಹಕ್ಕುಪತ್ರಕ್ಕೆ ನಿಗದಿಗೊಳಿಸಿದ ದರವನ್ನು ರಿಯಾಯಿತಿಗೊಳಿಸಿ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಶಾಸಕ ಕಿರಣ್ ಕೊಡ್ಗಿ, ಕಂದಾಯ ಸಚಿವ ಕೃಷ್ಣ ಬೈರೇಗೌಡರನ್ನು ವಿಕಾಸ ಸೌಧದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.
ಸುಮಾರು 400ಕ್ಕೂ ಮಿಕ್ಕಿ ಅರ್ಜಿದಾರರ ಪೈಕಿ ಈಗಾಗಲೇ ಹಲವರಿಗೆ ಮಂಜೂರಾತಿ ನೀಡಲಾಗಿದ್ದು, ಕಂದಾಯ ಇಲಾಖೆ ನಿಗದಿಕರಿಸಿದ ಮೊತ್ತ ಪಾವತಿಸಲು ಬಡವರಿಗೆ ಕಷ್ಟ ಆಗಿರುವುದರಿಂದ ಮಲ್ಪೆಪಡುಕರೆಯ ಕೊಳ ಗ್ರಾಮದಲ್ಲಿ ನೀಡಿರುವ ರಿಯಾಯಿತಿ ದರದ ಮಾದರಿಯಲ್ಲಿ ಕೋಡಿ ಗ್ರಾಮದ ಮೀನುಗಾರರಿಗೆ ಹಣ ಪಾವತಿಗೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕರು ಮನವಿಯಲ್ಲಿ ತಿಳಿಸಿದ್ದಾರೆ.
ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಇಲಾಖೆಯ ಮುಂದೆ ಮಂಡಿಸಿದ ಮಾಹಿತಿಗಳನ್ನು ಸಚಿವರಿಗೆ ನೀಡಿದ ಕೊಡ್ಗಿ, ಬಹುಬೇಗ ದರ ರಿಯಾಯಿತಿ ಆದೇಶ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.
Next Story