ಸಬಲೆಂಕಾಗೆ ಸೋಲುಣಿಸಿದ ಮುಚೋವಾ ಮೊದಲ ಬಾರಿ ಫೆನಲ್‌ಗೆ
ಪ್ಯಾರಿಸ್: ಮಹಿಳೆಯರ ಸಿಂಗಲ್ಸ್‌ನ ಮೊದಲ ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಅರ್ಯನಾ ಸಬಲೆಂಕಾರನ್ನು ಮಣಿಸಿದ ಶ್ರೇಯಾಂಕರಹಿತ ಆಟಗಾರ್ತಿ ಕರೊಲಿನಾ ಮುಚೋವಾ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಈ ಮೂಲಕ ವಿಶ್ವದ ನಂ.1 ಆಟಗಾರ್ತಿಯಾಗಬೇಕೆಂಬ ಸಬಲೆಂಕಾ ಕನಸನ್ನು ಭಗ್ನಗೊಳಿಸಿದರು. ಗುರುವಾರ ನಡೆದ ಅಂತಿಮ-4ರ ಪಂದ್ಯದಲ್ಲಿ ಮುಚೋವಾ ಬೆಲಾರುಸ್‌ನ ಸಬಲೆಂಕಾರನ್ನು 7-6(7/5), 6-7(5/7), 7-5 ಸೆಟ್‌ಗಳ ಅಂತರದಿಂದ ಮಣಿಸಿದರು. ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸಬಲೆಂಕಾರ 12 ಪಂದ್ಯಗಳ ಗೆಲುವಿನ ದಾಖಲೆಯನ್ನು ಮುರಿದರು. ದ್ವಿತೀಯ ಶ್ರೇಯಾಂಕದ ಸಬಲೆಂಕಾ ಪ್ಯಾರಿಸ್‌ನಲ್ಲಿ ಪ್ರಶಸ್ತಿ ಗೆಲ್ಲುತ್ತಿದ್ದರೆ ಮಹಿಳಾ ವಿಶ್ವ
್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೆ ಏರಬಹುದಿತ್ತು. ಆದರೆ ತನಗೆ ಲಭಿಸಿದ ಅವಕಾಶವನ್ನು ಕೈಚೆಲ್ಲಿದ ಸಬಲೆಂಕಾ ಝೆಕ್ ಆಟಗಾರ್ತಿಗೆ ಉಡುಗೊರೆಯನ್ನು ನೀಡಿದರು. ಪ್ರಸಕ್ತ ಟೂರ್ನಿಯಲ್ಲಿ ಬಲಿಷ್ಠ ಆಟಗಾರ್ತಿಯರನ್ನು ಮಣ್ಣುಮುಕ್ಕಿಸಿರುವ ಮುಚೋವಾ ಅವರು ಮೊದಲ ಸುತ್ತಿನಲ್ಲಿ 8ನೇ ಶ್ರೇಯಾಂಕದ ಮರಿಯಾ ಸಕ್ಕಾರಿ ಹಾಗೂ ಕ್ವಾರ್ಟರ್‌ಫೈನಲ್‌ನಲ್ಲಿ 2021ರ ರನ್ನರ್ಸ್ ಅಪ್ ಅನಸ್ತೇಸಿಯಾ ಪಾವ್ಲಚೆಂಕೋವಾರನ್ನು ಸೋಲಿಸಿದ್ದರು.
‘‘ನನಗೆ ಸಾಕಷ್ಟು ಅವಕಾಶಗಳಿದ್ದವು. ಆದರೆ ಅದನ್ನು ಬಳಸಿಕೊಳ್ಳಲಿಲ್ಲ. ಈ ಕಠಿಣ ಸೋಲಿನಿಂದ ನನಗೆ ತುಂಬಾ ಬೇಸರವಾಗಿದೆ. ಈ ಪಂದ್ಯದಿಂದ ನಾನು ಪಾಠ ಕಲಿಯುವೆ. ಬಲಿಷ್ಠವಾಗಿ ಮರು ಹೋರಾಡುವೆ’’ ಎಂದು ಸಬಲೆಂಕಾ ಹೇಳಿದ್ದಾರೆ. ಪ್ಯಾರಿಸ್‌ನಲ್ಲಿ ಈ ಮೊದಲು ಮುಚೋವಾಗಿಂತ ಕೆಳ ರ್ಯಾಂಕಿನ ಮೂವರು ಆಟಗಾರರು ಫೈನಲ್‌ಗೆ ತಲುಪಿದ್ದಾರೆ. 2020ರಲ್ಲಿ ಯುವ ಆಟಗಾರ್ತಿ ಸ್ವಿಯಾಟೆಕ್ ತನ್ನ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆದ್ದಾಗ 54ನೇ ರ್ಯಾಂಕಿನಲ್ಲಿದ್ದರು.