ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಬ್ರಾಡ್ಮನ್, ಬಾರ್ಡರ್ ದಾಖಲೆ ಸರಿಗಟ್ಟಿದ ಶಾರ್ದೂಲ್ ಠಾಕೂರ್!
ಲಂಡನ್, ಜೂ.9: ಆಸ್ಟ್ರೇಲಿಯ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ 3ನೇ ದಿನವಾದ ಶುಕ್ರವಾರ ದಿ ಓವಲ್ ಕ್ರೀಡಾಂಗಣದಲ್ಲಿ ಸತತ ಮೂರನೇ ಟೆಸ್ಟ್ ಅರ್ಧಶತಕ ಸಿಡಿಸಿದ ಭಾರತದ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಆಸ್ಟ್ರೇಲಿಯದ ದಂತಕತೆಗಳಾದ ಡಾನ್ ಬ್ರಾಡ್ಮನ್ ಹಾಗೂ ಅಲನ್ ಬಾರ್ಡರ್ ಅವರ ದಾಖಲೆಯನ್ನು ಸರಿಗಟ್ಟಿದರು.
7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಶಾರ್ದೂಲ್ 108 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಮುಂದಿನ ಎಸೆತದಲ್ಲಿ ಆಸೀಸ್ ನಾಯಕ ಕಮಿನ್ಸ್ ಬೌಲಿಂಗ್‌ನಲ್ಲಿ 51 ರನ್‌ಗೆ ಔಟಾದರು.ರಹಾನೆ ಅವರೊಂದಿಗೆ 109 ರನ್ ಜೊತೆಯಾಟ ನಡೆಸಿದ ಶಾರ್ದೂಲ್ ಭಾರತಕ್ಕೆ ಆಸರೆಯಾದರು.
ಶಾರ್ದೂಲ್ 2021ರಲ್ಲಿ ದಿ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸತತ ಎರಡು ಬಾರಿ ಅರ್ಧಶತಕ ಸಿಡಿಸಿದ್ದರು. ಇದೀಗ ಡಾನ್ ಬ್ರಾಡ್ಮನ್(1930-34) ಹಾಗೂ ಅಲನ್ ಬಾರ್ಡರ್(1985-89)ನಂತರ ಒಂದೇ ಮೈದಾನದಲ್ಲಿ ಸತತ 3 ಅರ್ಧಶತಕಗಳನ್ನು ಸಿಡಿಸಿದ ಪ್ರವಾಸಿ ತಂಡದ ಮೂರನೇ ಬ್ಯಾಟರ್ ಎನಿಸಿಕೊಂಡರು.
ಮುಂಬೈ ಬ್ಯಾಟರ್ ಶಾರ್ದೂಲ್ ತನ್ನ ಎಲ್ಲ 4 ಅರ್ಧಶತಕಗಳನ್ನು ವಿದೇಶಿ ನೆಲದಲ್ಲಿ ಗಳಿಸಿದ್ದಾರೆ. 2021ರಲ್ಲಿ ಆಸ್ಟ್ರೇಲಿಯ ವಿರುದ್ಧ ಬ್ರಿಸ್ಬೇನ್‌ನಲ್ಲಿ ಮೊದಲ ಅರ್ಧಶತಕ ಗಳಿಸಿದ್ದರು.
Shardul Thakur joins a list of elite names with his third successive fifty-plus score at The Oval#WTC23 | #AUSvIND pic.twitter.com/RerHvEpZPL
— ICC (@ICC) June 9, 2023