ಬಿಜೆಪಿಯಿಂದ ಆರೆಸ್ಸೆಸ್, ಸಂಘಪರಿವಾರಕ್ಕೆ ನಾಡಿನ ನೂರಾರು ಎಕರೆ ಭೂಮಿ ಪರಭಾರೆ: ದಿನೇಶ್ ಗುಂಡೂರಾವ್

ಬೆಂಗಳೂರು, ಜೂ.9: ರಾಜ್ಯದ ನೂರಾರು ಎಕರೆ ಭೂಮಿಯನ್ನು ಕಾನೂನು ಬಾಹಿರವಾಗಿ ಆರೆಸ್ಸೆಸ್, ಸಂಘ ಪರಿವಾರದ ಸಂಸ್ಥೆಗಳಿಗೆ ಹಿಂದಿನ ಬಿಜೆಪಿ ಸರಕಾರ ಪರಭಾರೆ ಮಾಡಿದ್ದು, ಈ ಸಂಬಂಧ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಅನುಕೂಲವಾಗುವ ಹಾಗೂ ಸಿದ್ದಾಂತಕ್ಕೆ ಹೊಂದಿಕೊಂಡಿರುವ ಆರೆಸ್ಸೆಸ್, ಸಂಘ ಪರಿವಾರದ ಸಂಸ್ಥೆಗಳಿಗೆ ನಿಯಮ ಮೀರಿ ಭೂಮಿ ನೀಡಲಾಗಿದೆ. ಈ ಬಗ್ಗೆ ತಮ್ಮ ಸರಕಾರ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂದೆ ಆಡಳಿತ ನಡೆಸಿದ ಬಿಜೆಪಿಯವರು ಪ್ರತಿಯೊಂದು ವಿಚಾರದಲ್ಲಿಯೂ ಕೋಮು ದ್ವೇಷ ಬಿತ್ತುವ ಕೆಲಸ ಮಾಡಿದ್ದರು. ಪಠ್ಯಪುಸ್ತಕ ಪರಿಷ್ಕರಣೆ, ಸರಕಾರದ ಸಂಸ್ಥೆಗಳಲ್ಲಿ ತಮಗೆ ಬೇಕಾದವರನ್ನು ಕೂರಿಸಿ ಕೋಮುಭಾವನೆ ಬೆಳೆಸುವುದು ಸೇರಿದಂತೆ ಅನೇಕ ಲೋಪಗಳನ್ನು ಮಾಡಿದ್ದಾರೆ.ಪಠ್ಯಪುಸ್ತಕ ಪರಿಷ್ಕರಣೆಯಲ್ಲಂತೂ ಬಿಜೆಪಿಯವರು ಉದ್ದೇಶ ಪೂರ್ವಕವಾಗಿಯೇ ಇತಿಹಾಸ ತಿರುಚುವ ಕೆಲಸ ಮಾಡಿದರು. ಕೋಮುವಾದ ಬೆಳೆಗೆ ದ್ವೇಷ ಬೆಳೆಸುವುದು ಅವರ ಮೂಲ ಉದ್ದೇಶವಾಗಿತ್ತು ಎಂದು ಟೀಕಿಸಿದರು.
ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ಈಗಲೇ ತಾವು ಹೇಳಿಕೆ ನೀಡುವುದಿಲ್ಲ. ಹಂತ ಹಂತವಾಗಿ ಸಭೆಗಳನ್ನು ನಡೆಸುತ್ತಿದ್ದೇನೆ. ಮತ್ತಷ್ಟು ಸಭೆಗಳನ್ನು ನಡೆಸಬೇಕಿದೆ. ಎಲ್ಲ ಪರಿಶೀಲನೆ ಹಾಗೂ ಮಾಹಿತಿ ಸಂಗ್ರಹದ ಬಳಿಕ ಮುಂದಿನ ವಾರ ಸ್ಪಷ್ಟ ಮಾಹಿತಿ ನೀಡುತ್ತೇನೆ ಎಂದು ಸಚಿವರು ಉಲ್ಲೇಖಿಸಿದರು.







